ಸಾರಾಂಶ
ಪ್ರಥಮ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆಯ ಹೊಂಡ -ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಬೆಳ್ತಂಗಡಿ : ಮುಂದಿನ ಎರಡು ವರ್ಷದೊಳಗೆ ಬೆಳ್ತಂಗಡಿ ಪೇಟೆ ಸಹಿತ ತಾಲೂಕಿನಲ್ಲಿ ಹಾದು ಹೋಗುವ ರಾ.ಹೆ.ಯ ಚಿತ್ರಣವೇ ಬದಲಾಗಲಿದೆ. ಹದೆಗೆಟ್ಟಿರುವ ಹೆದ್ದಾರಿ ಕಾಮಗಾರಿ ಆ.12 ರಂದು ಮತ್ತೆ ಪ್ರಾರಂಭವಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ರಸ್ತೆಯ ಮುಂದಿನ ಕಾಮಗಾರಿಯನ್ನು ಗುತ್ತಿಗೆದಾರ ಮೊಗೇರೋಡಿ ಕನ್ನಕ್ಷನ್ ನವರು ಆ.12 ರಿಂದ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಪುಂಜಾಲಕಟ್ಟೆ – ಚಾರ್ಮಾಡಿ ಹೆದ್ದಾರಿ ಕಾಮಗಾರಿಯನ್ನು ಡಿ.ಪಿ ಜೈನ್ ವಹಿಸಿಕೊಂಡಿದ್ದು, ಹೆದ್ದಾರಿ ಕಾಮಗಾರಿಗೆ ಹಣ ಬಿಡುಗಡೆ ಆಗಿದೆ. ಆದರೆ ಜಿಲ್ಲೆಯ ಹವಾಮಾನದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಕಾಮಗಾರಿ ಮಾಡುವಲ್ಲಿ ಸಮಸ್ಯೆಯಾಗಿ ಬೆಳ್ತಂಗಡಿ ತಾಲೂಕಿನ ಜನರು ಸಂಕಷ್ಟ ಪಡುತ್ತಿದ್ದಾರೆ. ಜನರಿಗೆ ಆಗಿರುವ ಸಮಸ್ಯೆ ನಿವಾರಣೆಗೆ ಶಾಸಕ ಹರೀಶ್ ಪೂಂಜ ಹಾಗೂ ನಾನು ಗುತ್ತಿಗೆದಾರ ಮೂಲಕ ಪ್ರಯತ್ನ ಮಾಡಿದರೂ, ಸಫಲವಾಗಲಿಲ್ಲ. ಇದಕ್ಕಾಗಿ ಗುತ್ತಿಗೆದಾರ ಡಿ.ಪಿ ಜೈನ್, ಹೆದ್ದಾರಿ ಮುಖ್ಯ ಎಂಜಿನಿಯರ್ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಮುಂದಿನ ಹೆದ್ದಾರಿ ಕಾಮಗಾರಿಯನ್ನು ಮೋಗೇರೋಡಿ ಕನ್ಸಕ್ಷನ್ ಅವರು ಮಾಡುವುದಾಗಿ ನಿರ್ಧರಿಸಲಾಗಿದೆ. ಇದಕ್ಕೆ ಗುತ್ತಿಗೆದಾರ ಡಿ.ಪಿ.ಜೈನ್ ಒಪ್ಪಿಗೆ ನೀಡಿದ್ದಾರೆ ಎಂದು ವಿವರಿಸಿದರು.
ಪ್ರಥಮ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆಯ ಹೊಂಡ -ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಈ ಕಾಮಗಾರಿಯನ್ನು ಸೋಮವಾರ ಆರಂಭಿಸಲಾಗುವುದು ಎಂದು ತಿಳಿಸಿದರು. ಶಾಸಕ ಹರೀಶ್ ಪೂಂಜ ಮಾತನಾಡಿ, ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ವಿನಂತಿಸಿ, ಡಿಪಿಆರ್ ತಯಾರಿಸಿ ರೂ. 700 ಕೋಟಿ ಅನುದಾನ ಮಂಜೂರು ಆಯಿತು. ಇದರ ಗುತ್ತಿಗೆಯನ್ನು ನಾಗಪುರದ ಡಿ.ಪಿ ಜೈನ್ ವಹಿಸಿಕೊಂಡು ಕಳೆದ ವರ್ಷ ಕೆಲಸ ಆರಂಭಿಸಿದರು. ಆದರೆ ದ.ಕ ಜಿಲ್ಲೆ ಇತರ ಜಿಲ್ಲೆಗಳಂತೆ ಅಲ್ಲ ಇಲ್ಲಿ ಆರೇಳು ತಿಂಗಳು ಮಳೆಯಿಂದಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಇದ್ದರು.