ಸಾರಾಂಶ
ರಾಮನಗರ: ಪೋಷಕರು ಮತ್ತು ಗುರುಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಗಳು ಆತಂಕ ಬಿಟ್ಟು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಿಡದಿ ಪಟ್ಟಣದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹೋಬಳಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ 21 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಇರುತ್ತದೆ. ನಾನು ಶಿಕ್ಷಣ, ಆರೋಗ್ಯ, ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಪರೀಕ್ಷೆ ಬರೆಯುತ್ತಿರುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಸಣ್ಣ ಪ್ರಯತ್ನ ನನ್ನದು. ಗುರು ಮತ್ತು ತಂದೆ ತಾಯಿಗೆ ಹೆಸರು ತರಲು ಭಯ ಬಿಟ್ಟು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕ್ಷೇತ್ರ ಶಿಕ್ಷಾಧಿಕಾರಿ ಪಿ.ಸೋಮಲಿಂಗಯ್ಯ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ನಿರಂತರ ಹತ್ತು ವರ್ಷ ಶಿಕ್ಷಣ ಪಡೆದು ಪಬ್ಲಿಕ್ ಪರೀಕ್ಷೆ ಬರೆಯುತ್ತಿದ್ದೀರಿ. ಎಲ್ಲ ಮಕ್ಕಳಿಗೂ ವಿನೂತನವಾಗಿ ಶುಭ ಕೋರುತ್ತಿರುವ ಗಾಣಕಲ್ ನಟರಾಜು ಅವರಿಗೆ ಶಿಕ್ಷಣ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಸಿಆರ್‌ಪಿ ಚಿಕ್ಕವೀರಯ್ಯ ಮಾತನಾಡಿ, ಶಿಕ್ಷಣದ ಬಗೆಗಿನ ಕಾಳಜಿ ಮತ್ತು ಮಕ್ಕಳ ಶಿಕ್ಷಣಕ್ಕೆ ಬೇಕಾದ ಅಗತ್ಯಗಳನ್ನು ಅರ್ಥ ಮಾಡಿಕೊಂಡು ನೆರವಾಗುವ ಕೆಲಸದಲ್ಲಿ ನಟರಾಜು ಮುಂಚೂಣಿಯಲ್ಲಿ ಇರುತ್ತಾರೆ. ಎರಡು ವರ್ಷಗಳಿಂದ ಬಿಸಿಯೂಟಕ್ಕೆ ಉಚಿತವಾಗಿ ದಾನಿಗಳ ಮೂಲಕ ತಾಜಾ ತರಕಾರಿಗಳನ್ನು ವಿತರಿಸಿದ ಕೀರ್ತಿ ಸಹ ಅವರದ್ದಾಗಿದೆ ಎಂದರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಪರೀಕ್ಷೆ ಎಂಬುದು ಕೇಳಿದ ಪ್ರಶ್ನೆಗೆ ತಾವು ಕಲಿತ, ತಮ್ಮೊಳಗೆ ಹುದುಗಿರುವ ಉತ್ತರವನ್ನು ದಾಖಲಿಸುವುದಾಗಿದೆ. ಕೊಡು ಕೊಳ್ಳುವಿಕೆಯ ಜ್ಞಾನದ ವಿನಿಮಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಬರವಣಿಗೆಯನ್ನು ಪ್ರೀತಿಸುವ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿ ಸುವ ಪ್ರಯತ್ನ ಮಾಡಿ ಅದರಿಂದ ಹೆಚ್ಚು ಅಂಕ ಗಳಿಸುವ ಸಾಧ್ಯತೆಯಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಸವೇಶ್ವರ ಗ್ರಾಮಾಂತರ ಪ್ರೌಢ ಶಾಲೆ ಮುಖ್ಯಶಿಕ್ಷಕ ಗಿರೀಶ್ ಸೇರಿದಂತೆ ಹೋಬಳಿಯ 21 ಪ್ರೌಢಶಾಲಾ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.
19ಕೆಆರ್ ಎಂಎನ್ 2.ಜೆಪಿಜಿಬಿಡದಿ ಪಟ್ಟಣದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ 21 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗಾಣಕಲ್ ನಟರಾಜ್ ಪರೀಕ್ಷಾ ಪರಿಕರಗಳನ್ನು ವಿತರಿಸಿದರು.