ಸಾರಾಂಶ
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತಿತರರಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಆಗಿರುವ ಸರ್ಕಾರಿ ಜಮೀನಿನ ಒತ್ತುವರಿ ತೆರವು ಕುರಿತು 10 ದಿನಗಳಲ್ಲಿ ವರದಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೊರ್ಟ್ ತಾಕೀತು ಮಾಡಿದೆ.
ಭೂ ಕಬಳಿಕೆ ಪ್ರಕರಣದ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರ ಆದೇಶ ಜಾರಿ ಮಾಡುವಂತೆ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲಿಸದ ರಾಜ್ಯ ಸರ್ಕಾರದ ನಡೆ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಏ.3ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಹೈಕೋರ್ಟ್‌ನ ಹಿಂದಿನ ಆದೇಶದಂತೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಅವರ ಪರ ರಾಜ್ಯ ಸರ್ಕಾರಿ ವಕೀಲರು ವಾದಿಸಿ, ಕೇತಗಾನಹಳ್ಳಿ ಸುತ್ತಮುತ್ತ ಸ್ಥಳೀಯರಿಗೆ ಸರ್ಕಾರದಿಂದ ಮಂಜೂರಾಗಿರುವ ಗೋಮಾಳ ಜಮೀನು ಕುರಿತು ಪರಿಶೀಲಿಸಲು ಸಮಿತಿ ರಚನೆಯಾಗಿದೆ. ಈಗಾಗಲೇ 14 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ18 ಎಕರೆ ಒತ್ತುವರಿ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತಿದೆ. ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಲಾಗುವುದು ಎಂದರು.
ಅದಕ್ಕೆ ತೀವ್ರ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಒಟ್ಟು 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ಯಾವುದಕ್ಕೂ ಮಂಜೂರಾತಿ ಪತ್ರ ಇಲ್ಲ. ನಕಲಿ ಮಂಜೂರಾತಿ ಪತ್ರ ಆಧರಿಸಿ ಗೋಮಾಳ ಜಮೀನನ್ನು ರಾಜಕಾರಣಿಗಳು ಹಾಗೂ ಪ್ರಭಾವಿಗಳು ಖರೀದಿಸಿದ್ದಾರೆ. ಈ ಕುರಿತು 2014ರಲ್ಲೇ ತಹಶೀಲ್ದಾರ್ ವರದಿ ನೀಡಿದ್ದರು. ಆದ್ದರಿಂದ ಈವರೆಗೂ ಆ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿಲ್ಲ. ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿ, ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದರು.
ಕೇತಗಾನಹಳ್ಳಿಯಲ್ಲಿ ಎಷ್ಟು ಜಮೀನು ಸ್ಥಳೀಯರಿಗೆ ಮಂಜೂರು ಮಾಡಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ರಾಜೇಂದ್ರ ಕಟಾರಿಯಾ ಕೇತಗಾನಹಳ್ಳಿಯಲ್ಲಿ ಸರ್ಕಾರದಿಂದ ಜಮೀನು ಮಂಜೂರಾತಿ ದಾಖಲೆಗಳು ಇಲ್ಲವಾಗಿದೆ. ಆ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದೆ. ಸಮಿತಿಯು ಭೂ ಮಂಜೂರಾತಿ ಅಸಲಿಯೇ ಅಥವಾ ನಕಲಿಯೇ ಎಂಬದನ್ನು ಪರಿಶೀಲಿಸಲಿದೆ. ಈ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದಿಂದಲೂ ವರದಿ ಪಡೆಯಲಿದ್ದು, ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಬಡವರಾಗಿದ್ದರೆ ಬುಲ್ಡೋಜರ್ ತರ್ತೀರಿ: ನ್ಯಾಯಪೀಠ ಕಿಡಿ
ನ್ಯಾಯಪೀಠ, ಈಗ ದಾಖಲೆ ನಾಪತ್ತೆಯಾಗಿವೆ. ಮುಂದೆ ಜಮೀನು ನಾಪತ್ತೆಯಾಗಬಹುದು. ಪ್ರಭಾವಿಗಳು ಒತ್ತುವರಿ ಮಾಡಿರುವುದರಿಂದ ಕೈ ಕಟ್ಟಿ ಕುಳಿತ್ತಿದ್ದೀರಿ. ಅದೇ ಭಿಕ್ಷುಕರು, ಬಡವರು ಐದಾರಡಿ ಒತ್ತುವರಿ ಮಾಡಿದರೆ ಬುಲ್ಡೋಜರ್ ತೆಗೆದುಕೊಂಡು ಹೋಗಿ ತೆರವು ಮಾಡುತ್ತಿದ್ದೀರಿ. ಸರ್ಕಾರಕ್ಕೆ ಧೈರ್ಯವಿದ್ದರೆ ಒತ್ತುವರಿ ತೆರವುಗೊಳಿಸಿ ವಶಕ್ಕೆ ಜಮೀನು ಪಡೆಯಬೇಕು. ಇಲ್ಲವಾದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸುತ್ತದೆ. ಜಮೀನು ಒತ್ತುವರಿಯಿಂದ ಪಡೆದಿರುವ ಲಾಭವನ್ನೂ ವಸೂಲಿಗೆ ಆದೇಶಿಸಬೇಕಾಗಬಹುದು ಎಂದು ಎಚ್ಚರಿಸಿತು.