ಸಾರಾಂಶ
ಕೇಂದ್ರ ಸಚಿವ ಸಚಿವರು, ಕೇಂದ್ರ ಸಚಿವಾಲಯದ ಬಹುತೇಕ ಅಧಿಕಾರಿಗಳೂ ಹಿಂದಿಯಲ್ಲೇ ಸಂವಹನ ನಡೆಸುತ್ತಾರೆ. ಇದರ ಬಿಸಿ ಇದೀಗ ಕೇಂದ್ರದಲ್ಲಿ ಸಚಿವರಾಗಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ತಟ್ಟಿದೆ. ಹೀಗಾಗಿ ಅವರೀಗ ಅನಿವಾರ್ಯವಾಗಿ ಹಿಂದಿ ಭಾಷೆ ಕಲಿಯಲು ಮುಂದಾಗಿದ್ದಾರೆ.
ನವದೆಹಲಿ: ದಕ್ಷಿಣ ಭಾರತದ ಸಂಸದರು ಕೇಂದ್ರದಲ್ಲಿ ಸಚಿವರಾದರೆ ಉತ್ತರ ಭಾರತದಲ್ಲಿ ಸಂವಹನ ನಡೆಸುವುದು ಬಹುದೊಡ್ಡ ಸವಾಲು. ಕಾರಣ- ದಕ್ಷಿಣ ಭಾರತದ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಕಡೆ ಹಿಂದಿ ಸಾಮಾನ್ಯ ಭಾಷೆಯಾಗಿದೆ. ಇದರ ಜೊತೆಗೆ ಕೇಂದ್ರ ಸಚಿವರು, ಕೇಂದ್ರ ಸಚಿವಾಲಯದ ಬಹುತೇಕ ಅಧಿಕಾರಿಗಳೂ ಹಿಂದಿಯಲ್ಲೇ ಸಂವಹನ ನಡೆಸುತ್ತಾರೆ. ಇದರ ಬಿಸಿ ಇದೀಗ ಕೇಂದ್ರದಲ್ಲಿ ಸಚಿವರಾಗಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ತಟ್ಟಿದೆ. ಹೀಗಾಗಿ ಅವರೀಗ ಅನಿವಾರ್ಯವಾಗಿ ಹಿಂದಿ ಭಾಷೆ ಕಲಿಯಲು ಮುಂದಾಗಿದ್ದಾರೆ.
ಹೌದು. ದೆಹಲಿಯಲ್ಲಿ ಇರುವ ವೇಳೆ ವಾರದ ದಿನಗಳಲ್ಲಿ ನಿತ್ಯವೂ 90 ನಿಮಿಷಗಳನ್ನು ಹಿಂದಿ ಕಲಿಕೆಗೆ ಎಚ್‌ಡಿಕೆ ಮೀಸಲಿಟ್ಟಿದ್ದಾರೆ. ಆನ್‌ಲೈನ್ ಮೂಲಕ ನಡೆಯುವ ತರಗತಿಯಲ್ಲಿ ಭಾಗಿಯಾಗುತ್ತಿರುವ ಅವರು, ಹಿಂದಿ ಓದುವುದು, ಬರೆಯುವುದು ಮತ್ತು ಸಂವಹನ ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ಉತ್ತರ ಭಾರತದಲ್ಲಿ ಬಹುತೇಕರು ಹಿಂದಿಯಲ್ಲೇ ಮಾತಾಡುತ್ತಾರೆ. ಸಂಸದರು, ಅಧಿಕಾರಿಗಳೂ ಹಿಂದಿಯಲ್ಲೇ ಮಾತಾಡುವ ಕಾರಣ ನನಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಬೇರೆ ದಾರಿಯಿಲ್ಲದೆ ಕಲಿಯುತ್ತಿದ್ದೇನೆ’ ಎಂದಿದ್ದಾರೆ.
ಕುಮಾರಸ್ವಾಮಿ ಈಗಾಗಲೇ 2 ಬಾರಿ ಸಂಸದರಾಗಿದ್ದರೂ, ಕೇಂದ್ರ ಸಚಿವರಾಗಿರುವುದು ಇದೇ ಮೊದಲು. ಎಚ್‌ಡಿಕೆಗೆ ಆಂಗ್ಲ ಭಾಷೆ ಬರುತ್ತದೆಯಾದರೂ, ಎಲ್ಲರೊಂದಿಗಿನ ಸಂಭಾಷಣೆಯಲ್ಲಿ ಇದು ಸಹಕಾರಿಯಲ್ಲ ಎಂದು ಅರಿತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಹಿಂದಿ ಕಲಿಕೆಯನ್ನು ಶುರುವಿಟ್ಟುಕೊಂಡಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕೂಡ 6 ತಿಂಗಳಲ್ಲಿ ಹಿಂದಿ ಕಲಿಯುವ ನಿರ್ಧಾರ ತೆಗೆದುಕೊಂಡಿದ್ದರು.
- ಓದುವುದು, ಬರೆಯುವುದು, ಸಂವಹನ ಬಗ್ಗೆ ತರಬೇತಿ- ಆನ್‌ಲೈನ್ ಮೂಲಕ ಕಲಿಯುತ್ತಿರುವ ಕುಮಾರಸ್ವಾಮಿ
- ದಕ್ಷಿಣ ಭಾರತದಿಂದ ಕೇಂದ್ರ ಮಂತ್ರಿಯಾದವರಿಗೆ ಹಿಂದಿ ಸಂವಹನ ಸಮಸ್ಯೆ- ಇದೇ ಕಾರಣದಿಂದ ಆರು ತಿಂಗಳ ಹಿಂದೆ ಹಿಂದಿ ಕಲಿಕೆ ಆರಂಭಿಸಿದ್ದ ಸೋಮಣ್ಣ- ಈಗ ಕುಮಾರಸ್ವಾಮಿ ಸರದಿ. ಆನ್‌ಲೈನ್ ಕೋರ್ಸ್‌ಗೆ ಪ್ರವೇಶ ಪಡೆದಿರುವ ಎಚ್‌ಡಿಕೆ- ದೆಹಲಿಯಲ್ಲಿ ಇರುವ ವೇಳೆ ವಾರದ ದಿನಗಳಲ್ಲಿ 90 ನಿಮಿಷ ಹಿಂದಿ ಕಲಿಕೆಗೆ ಮೀಸಲು- ಆನ್‌ಲೈನ್ ತರಗತಿಯಲ್ಲಿ ಹಿಂದಿ ಓದುವುದು, ಬರೆಯುವುದನ್ನು ಕಲಿಯುತ್ತಿರುವ ಸಚಿವ- ಮಾತನಾಡುವ ಕಲೆಯನ್ನೂ ರೂಢಿಸಿಕೊಳ್ಳುತ್ತಿರುವ ಕರ್ನಾಟಕದ ಮಾಜಿ ಸಿಎಂ