ಸಾರಾಂಶ
ಆಬಾಲವೃದ್ಧರಾದಿಯಾಗಿ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಚರ್ಚ್ ಹಾಗೂ ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕಾರವಾರ: ಜಿಲ್ಲಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಕ್ರಿಶ್ಚಿಯನ್ ಸಮುದಾಯದವರು ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಮಾಡಿದ ಕೇಕ್ ಹಂಚಿ ಪರಸ್ಪರ ಶುಭ ಕೋರಿದರು.
ಮಂಗಳವಾರ ಮಧ್ಯರಾತ್ರಿ ಚರ್ಚ್‌ಗಳಲ್ಲಿ ಸಾಮೂಹಿಕ ಕ್ಯಾರಲ್ ಹಾಗೂ ಆಯಾ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಬುಧವಾರ ಮನೆಗಳಲ್ಲಿ ವಿವಿಧ ಬಗೆಯ ಸಿಹಿ ಖಾದ್ಯ ತಯಾರಿಸಿ ಊಟ ಸವಿದರು. ಕೆಲವರು ಮನೆಯಲ್ಲಿ ಕೇಕ್ ತಯಾರಿಸಿದರೆ, ಮತ್ತೆ ಕೆಲವರು ಬೇಕರಿಯಿಂದ ಕೇಕ್ ತಂದು ಸಂಬಂಧಿಕರಿಗೆ, ಸ್ನೇಹಿತರಿಗೆ, ನೆರೆ ಹೊರೆಯವರಿಗೆ ನೀಡಿ ಶುಭ ಕೋರಿದರು.ಆಬಾಲವೃದ್ಧರಾದಿಯಾಗಿ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಚರ್ಚ್ ಹಾಗೂ ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಜತೆಗೆ ಏಸು ಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಚಿತ್ತಾಕರ್ಷಕವಾಗಿರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಪುಟಾಣಿಗಳು ಸಾಂತಾ ಕ್ಲಾಸ್ ಬಟ್ಟೆ ಧರಿಸಿ ಸಂಭ್ರಮಿಸಿದರು.
ಜೋಯಿಡಾ ತಾಲೂಕಿನಾದ್ಯಂತ ಸಂಭ್ರಮ ಸಡಗರಗಳ ನಡುವೆ ಯೇಸುವಿನ ಜನನದ ಸಡಗರದ ಕ್ರಿಸ್ಮಸ್ ಹಬ್ಬವನ್ನು ಜೋಯಿಡಾ, ಕುಂಬಾರವಾಡ ನಂದಿಗದ್ದೆ ರಾಮನಗರ ಸೇರಿದಂತೆ ಕ್ರಿಶ್ಚಿಯನ್ ಬಾಂಧವರು ಶಾಂತಿ, ಪ್ರೀತಿ, ನೆಮ್ಮದಿಯ ಸಹಬಾಳ್ವೆ ನಡೆಸುವ ಕುರಿತು ಬೇಡಿಕೊಂಡು ಎಲ್ಲರೊಂದಿಗೆ ಹಬ್ಬವನ್ನು ಆಚರಿಸಿದರು.ಹಳಿಯಾಳ ತಾಲೂಕಿನಲ್ಲಿ ಕ್ರಿಸ್‌ಮಸ್ ಸಡಗರ
ಹಳಿಯಾಳ: ತಾಲೂಕಿನೆಲ್ಲೆಡೆ ಕ್ರಿಸ್‌ಮಸ್ ಹಬ್ಬವನ್ನು ಶ್ರದ್ಧಾ- ಭಕ್ತಿಯಿಂದ ಹಾಗೂ ಆದ್ಧೂರಿಯಾಗಿ ಆಚರಿಸಲಾಯಿತು. ಎಲ್ಲೆಡೆ ಕಣ್ಮನ ಸೆಳೆಯುವ ದೀಪಾಲಂಕಾರ, ಆಕರ್ಷಕ ಗೋದಲಿಗಳು ಹಬ್ಬದ ಆಚರಣೆಗೆ ಕಳೆತಂದವು.ಮಂಗಳವಾರ ರಾತ್ರಿ ಇಲ್ಲಿಯ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಹಬ್ಬದ ದಿವ್ಯಪೂಜೆಯ ಮುನ್ನ ಕ್ರಿಸ್ತನ ಜನನವನ್ನು ಸಾರುವ ಭಕ್ತಿಗೀತೆಗಳ ಗಾಯನ(ಕ್ಯಾರಲ್ಸ್) ನಡೆಯಿತು. ಪಟ್ಟಣದ ವಿವಿಧ ವಾರ್ಡ್‌ಗಳ ಕ್ರೈಸ್ತರು, ಯುವ ಸಮೂಹ ಹಾಗೂ ಚಿಣ್ಣರು ಕ್ರಿಸ್‌ಮಸ್ ಗೀತೆಗಳನ್ನು ಹಾಡಿದರು.ಹಬ್ಬದ ಪೂಜಾ ವಿಧಿಯನ್ನು ಸಲ್ಲಿಸಿದ ಮಿಲಾಗ್ರಿಸ್ ಚರ್ಚ್ ಪ್ರಧಾನ ಗುರು ಫ್ರಾನ್ಸಿಸ್ ಮಿರಾಂಡಾ ಹಬ್ಬದ ಆಶೀರ್ವಚನ ನೀಡಿದ ಅವರು, ಕ್ರಿಸ್ತ ಜನಿಸಿ ಎರಡು ಸಾವಿರ ವರ್ಷಗಳಾದರೂ ಅವರ ಜನ್ಮದಿನದ ಆಚರಣೆಯ ಸಂಭ್ರಮ ಕಮ್ಮಿಯಾಗಲಿಲ್ಲ. ಕ್ರಿಸ್ತರು ಬೋಧಿಸಿದ ಕ್ಷಮೆ, ಪ್ರೀತಿ, ಶಾಂತಿ, ಸಹೋದರತ್ವ, ಸಹನೆ, ಕರುಣೆ, ಸಾಮರಸ್ಯ ಮೊದಲಾದ ತತ್ವಗಳನ್ನು ಜೀವನದಲ್ಲಿ ಪಾಲಿಸಿ ಕಾರ್ಯರೂಪಕ್ಕೆ ತಂದರೆ ಮಾತ್ರ ಅದೂ ನಿಜವಾದ ಕ್ರಿಸ್‌ಮಸ್ ಎಂದರು.ವಿವಿಧೆಡೆ ಆಚರಣೆ: ತಾಲೂಕಿನ ಗುಂಡೋಳ್ಳಿಯ ಚರ್ಚ್‌ನಲ್ಲಿ ಗುರು ನೋಯೆಲ್ ಪ್ರಕಾಶ, ಬುಡಕಟ್ಟು ಸಿದ್ದಿ ಸಮುದಾಯದವರು ನೆಲೆಸಿರುವ ಗರಡೊಳ್ಳಿ, ವಾಡ ಚರ್ಚ್‌ಗಳಲ್ಲಿ ಗುರು ರೊನಾಲ್ಡೊ, ಬುಕಿನಕೊಪ್ಪದಲ್ಲಿ ಗುರು ಡೊಮನಿಕ್, ಯಡೋಗಾ ಚರ್ಚ್‌ನಲ್ಲಿ ಗುರು ಉರ್ಬನ್ ಫರ್ನಾಂಡೀಸ್, ಮಂಗಳವಾಡ ಚರ್ಚ್‌ನಲ್ಲಿ ಗುರು ನಾತ್ವಿದಾದ, ಅಂಬಿಕಾನಗರ ಚರ್ಚ್‌ನಲ್ಲಿ ಗುರು ಜೇಮ್ಸ್, ಹಳಿಯಾಳ ಚರ್ಚ್ ವ್ಯಾಪ್ತಿಯ ತತ್ವಣಗಿ, ನಾಗಶೆಟ್ಟಿಕೊಪ್ಪ, ಕೆರವಾಡ ಗ್ರಾಮದಲ್ಲಿ ಗುರು ಫ್ರಾನ್ಸಿಸ್ ಮಿರಾಂಡಾ, ಗುರು ಅರುಣ ಕ್ರಿಸ್‌ಮಸ್ ಪೂಜಾ ವಿಧಿಗಳನ್ನು ಅರ್ಪಿಸಿದರು.