ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಯಾದರೂ, ಅದರ ಅನುಷ್ಠಾನದಲ್ಲಿ ಕಂಡುಬಂದಿರುವ ಲೋಪಗಳು ಹಾಗೂ ಹಣಕಾಸು ಅಕ್ರಮಗಳು ಯೋಜನೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ ಎಂದು ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಆರೋಪಿಸಿದರು. ಯೋಜನೆಯಲ್ಲಿನ ಅವ್ಯವಹಾರಗಳ ಕುರಿತು ಸರ್ಕಾರ ತಕ್ಷಣ ಶ್ವೇತಪತ್ರ ಪ್ರಕಟಿಸಬೇಕು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ವಿಸರ್ಜಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿನ ಅಂಶಗಳು ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿವೆ. ಸಾರ್ವಜನಿಕರ ತೆರಿಗೆ ಹಣವನ್ನು ಪಾರದರ್ಶಕವಾಗಿ ಬಳಕೆ ಮಾಡಬೇಕಾದ ಸರ್ಕಾರ, ಫಲಾನುಭವಿಗಳ ಗುರುತಿಸುವಿಕೆ ಮತ್ತು ಹಣ ವಿತರಣೆಯಲ್ಲೇ ಎಡವಿರುವುದು ವಿಷಾದನೀಯ ಎಂದರು. ಮೃತ ಮಹಿಳೆಯರ ಖಾತೆಗಳಿಗೆ ಕೋಟ್ಯಂತರ ರುಪಾಯಿ ಜಮೆಯಾಗಿರುವುದು, ಒಂದೇ ಫಲಾನುಭವಿಗೆ ಹಲವು ಬಾರಿ ಹಣ ವರ್ಗಾವಣೆಯಾಗಿರುವುದು, ದಾಖಲೆಗಳಿಲ್ಲದ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗಿರುವುದು ಹಾಗೂ ಅನರ್ಹರಿಗೆ ಯೋಜನೆಯ ಲಾಭ ತಲುಪಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು. ಇಂತಹ ಪ್ರಕರಣಗಳು ಕೇವಲ ತಾಂತ್ರಿಕ ದೋಷಗಳಲ್ಲ, ಹೊಣೆಗಾರಿಕೆ ಇಲ್ಲದ ಆಡಳಿತದ ಪರಿಣಾಮವೆಂದು ಟೀಕಿಸಿದರು.ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರ ಎಲ್ಲ ಮಹಿಳೆಯರಿಗೂ ಮರು ಅರ್ಜಿ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿದೆ. ಇದರಿಂದ ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮುಂದೆ ಮಹಿಳೆಯರು ಮಳೆ, ಬಿಸಿಲಿನಲ್ಲೂ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಯೋಜನೆ ಆರಂಭದಲ್ಲಿಯೇ ಸಮರ್ಪಕ ಪರಿಶೀಲನೆ ನಡೆಸಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದರು. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸುವ ಅನರ್ಹ ಮಹಿಳೆಯರೂ ಯೋಜನೆಯ ಸೌಲಭ್ಯ ಪಡೆದಿರುವುದು ಸರ್ಕಾರದ ಪರಿಶೀಲನಾ ವ್ಯವಸ್ಥೆಯ ವೈಫಲ್ಯವಾಗಿದೆ. ನಂತರ ಅವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಮೂಲಕ ಬಡ ಕುಟುಂಬಗಳಿಗೆ ಮತ್ತಷ್ಟು ತೊಂದರೆ ಉಂಟುಮಾಡಲಾಗಿದೆ ಎಂದು ದೂರಿದರು.

೨೦೨೫ರಲ್ಲಿ ಆಡಳಿತಾತ್ಮಕ ಗೊಂದಲದಿಂದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಸುಮಾರು ೫,೦೦೦ ಕೋಟಿ ಹಣ ಫಲಾನುಭವಿಗಳಿಗೆ ತಲುಪದೆ ಲ್ಯಾಪ್ಸ್ ಆಗಿದೆ. ಹಲವು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳು ಮಹಿಳೆಯರ ಖಾತೆಗೆ ಜಮೆಯಾದ ಹಣವನ್ನು ಹಳೆಯ ಸಾಲಗಳಿಗೆ ಕಡಿತ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಈ ಎಲ್ಲಾ ವಿಚಾರಗಳ ಕುರಿತು ಸರ್ಕಾರ ಸಮಗ್ರ ಉತ್ತರ ನೀಡಬೇಕಿದೆ ಎಂದು ಹೇಳಿದರು. ೨೦೨೩ರಲ್ಲಿ ಯೋಜನೆ ಆರಂಭವಾದಾಗ ಸೇವಾಸಿಂಧು ಪೋರ್ಟಲ್ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡ ಪರಿಣಾಮ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸಿದರು. ಆಧಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಸಮಸ್ಯೆಯಿಂದ ಲಕ್ಷಾಂತರ ಮಹಿಳೆಯರಿಗೆ ಮೊದಲ ಕಂತಿನ ಹಣವೇ ತಲುಪಿರಲಿಲ್ಲ. ಡೇಟಾ ಎಂಟ್ರಿ ದೋಷಗಳಿಂದ ಬೇರೆ ಖಾತೆಗಳಿಗೆ ಹಣ ವರ್ಗಾವಣೆಯಾದ ಪ್ರಕರಣಗಳೂ ವರದಿಯಾಗಿದ್ದವು ಎಂದು ವಿವರಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು ರಾಜಕೀಯ ನೇಮಕಾತಿಗಳ ಕೇಂದ್ರಗಳಾಗಿ ಪರಿಣಮಿಸಿವೆ. ಸಾರ್ವಜನಿಕರ ತೆರಿಗೆ ಹಣದಿಂದ ಅವರಿಗೆ ಭತ್ಯೆ ನೀಡುತ್ತಿರುವುದು ಸಮರ್ಥನೀಯವಲ್ಲ. ಆದ್ದರಿಂದ ಸರ್ಕಾರ ಕೂಡಲೇ ಗ್ಯಾರಂಟಿ ಸಮಿತಿಗಳನ್ನು ವಿಸರ್ಜಿಸಿ, ಆಡಳಿತಾತ್ಮಕ ಹೊಣೆಗಾರಿಕೆಯನ್ನು ಅಧಿಕಾರಿಗಳಿಗೆ ವಹಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಆರ್. ಮೋಹನ್, ಮಹಿಳಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್‌, ರಾಜಕುಮಾರ್, ಹಾಗೂ ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.