ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅನೇಕ ಉಪಜಾತಿಗಳಿದ್ದು ಅವುಗಳ ಜನಸಂಖ್ಯೆ ಮತ್ತು ಇತರೆ ಪೂರಕ ಮಾಹಿತಿಗಳನ್ನು ಕಲೆಹಾಕುವ ಕೆಲಸ ಮೇ ಮೊದಲ ವಾರದಿಂದ ಆರಂಭವಾಗಲಿದೆ. ಈ ಸಮೀಕ್ಷೆಯಲ್ಲಿ ಸಮುದಾಯದವರು ಕರಾರುವಾಕ್ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಸಮೀಕ್ಷೆಗೆ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ-೨೦೨೫’ ಎಂದು ಹೆಸರಿಡಲಾಗಿದೆ. ಕರ್ನಾಟಕ ಸರ್ಕಾರವು ಒಳಮೀಸಲಾತಿಗಾಗಿ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಆಯೋಗದ ಶಿಫಾರಸಿನ ಅನ್ವಯ ಈ ಸಮೀಕ್ಷೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮನ್ವಯ ಸಮಿತಿ ರಚನೆ: ಸಮೀಕ್ಷೆಗಾಗಿ ನಡೆಸುವುದಕ್ಕಾಗಿ ರಾಜ್ಯಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ. ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ. ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಬಳಸಿ ಮೂರು ಹಂತಗಳಲ್ಲಿ ನಡೆಸಲಾಗುವುದು.
ಮೊದಲ ಹಂತದಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ದತ್ತಾಂಶಗಳನ್ನು ಸಂಗ್ರಹಿಸಲಿದ್ದಾರೆ. ಈ ಗಣತಿಯು ಮೇ ೫ ರಿಂದ ಮೇ ೧೭ರ ತನಕ ನಡೆಯಲಿದೆ. ಎರಡನೇ ಹಂತದಲ್ಲಿ ಮೇ ೧೯ ರಿಂದ ೨೧ರ ತನಕ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ಸಂಗ್ರಹಿಸಲಾಗುವುದು. ಮೊದಲ ಎರಡೂ ಹಂತಗಳಲ್ಲಿ ಭಾಗವಹಿಸಲು ಸಾಧ್ಯವಾಗದವರು ಮೇ ೨೨ ರಿಂದ ೨೭ರ ತನಕ ಮೂರನೇ ಹಂತದಲ್ಲಿ ಪಾಲ್ಗೊಳ್ಳಬಹುದು.ಉಪಜಾತಿ ನಮೂದಿಸಿ
ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಉಪ ಜಾತಿಯನ್ನೂ ಕಡ್ಡಾಯವಾಗಿ ನಮೂದಿಸಬೇಕು. ಅದೇ ರೀತಿ, ಉಪಜಾತಿಗಳ ಜನಸಂಖ್ಯೆ, ಕುಟುಂಬ ಸಂಖ್ಯೆ, ಪಡೆದಿರುವ ಶಿಕ್ಷಣ, ಮಾಡುತ್ತಿರುವ ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯ ಮುಂತಾದ ಮಾಹಿತಿ ಸಂಗ್ರಹಿಸಲಾಗುತ್ತದೆ.ಸಮೀಕ್ಷೆ ಕುರಿತು ಸಂದೇಹಗಳಿದ್ದಲ್ಲಿ ಕೋಲಾರ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆಗಳಾದ ೦೮೧೫೨ ೩೫೮೩೫೪, ೯೪೮೦೮೪೩೧೫೯, ಅಥವಾ ೭೦೧೯೮೫೮೪೮೦ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.