ಸಾರಾಂಶ
ವಿಕಸಿತ ಭಾರತದ ಕಲ್ಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅಗತ್ಯ ಕಾರ್ಯ ಯೋಜನೆಗಳೊಂದಿಗೆ ಅಂಚೆ ಇಲಾಖೆ ಸೇರಿ ಎಲ್ಲ ಇಲಾಖೆಗಳ ಸುಧಾರಣೆಗೆ ಕ್ರಮವಹಿಸಿದ್ದಾರೆ ಎಂದು ಶಾಸಕ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ: ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಬಲವರ್ಧನೆಗೆ ಹೆಚ್ಚಿನ ಆಸಕ್ತಿ ವಹಿಸಿದೆ. ಈ ಮೂಲಕ ಇದನ್ನು ಮಾಡರ್ನ್ ಬ್ಯಾಂಕ್ ಪಟ್ಟಿಗೆ ಸೇರ್ಪಡೆಗೊಳಿಸಿ ಸೇವೆ ವಿಸ್ತಾರಗೊಳಿಸಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿಯ ಅಶೋಕನಗರದ ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಭಾರತೀಯ ಮಜ್ದೂರ ಸಂಘ ಹಾಗೂ ಭಾರತೀಯ ಅಂಚೆ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಭಾರತೀಯ ಅಂಚೆ ನೌಕರರ ಸಂಘಗಳ ಕರ್ನಾಟಕ ವಲಯದ 20ನೇ ದ್ವೈವಾರ್ಷಿಕ ಹಾಗೂ ಧಾರವಾಡ ವಿಭಾಗೀಯ 5ನೇ ದ್ವೈವಾರ್ಷಿಕ ಜಂಟಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ವಿಕಸಿತ ಭಾರತದ ಕಲ್ಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅಗತ್ಯ ಕಾರ್ಯ ಯೋಜನೆಗಳೊಂದಿಗೆ ಅಂಚೆ ಇಲಾಖೆ ಸೇರಿ ಎಲ್ಲ ಇಲಾಖೆಗಳ ಸುಧಾರಣೆಗೆ ಕ್ರಮವಹಿಸಿದ್ದು, 2047ರ ಹೊತ್ತಿಗೆ ಭಾರತ ಜಗತ್ತಿನ ನಂ. 1 ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಜಗತ್ತಿಗೆ ಭಾರತ ಮಾತೆಯನ್ನು ಜಗನ್ಮಾತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲ ಆಯಾಮದಲ್ಲಿಯೂ ಕೆಲಸ ಕಾರ್ಯಗಳು ನಡೆದಿವೆ. ಈ ನಿಟ್ಟಿನಲ್ಲಿ 2014ರ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಹುದೊಡ್ಡ ದಾಪುಗಾಲು ಇಟ್ಟಿದೆ. ಇದಕ್ಕೆ ಪೂರಕವಾಗಿ ಬಿಜೆಪಿ, ಎಬಿವಿಪಿ, ವಿಎಚ್‌ಪಿ, ಬಿಎಂಎಸ್ (ಭಾರತೀಯ ಮಜ್ದೂರ ಸಂಘ) ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. 70 ವರ್ಷಗಳ ಹಿಂದೆ ಸ್ಥಾಪಿತವಾದ ಬಿಎಂಎಸ್ ಈಗ 1 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.ಶನಿವಾರವಷ್ಟೇ ಮಂಡಿಸಿದ ಬಜೆಟ್‌ನಲ್ಲಿ ಎಂಎಸ್‌ಎಂಇ ಸೆಕ್ಟರ್‌ಗೆ ಪೋತ್ಸಾಹ, ಮಧ್ಯಮ ವರ್ಗ ಹಾಗೂ ನೌಕರರ ಅನುಕೂಲಕ್ಕೆ ₹12 ಲಕ್ಷ ವರೆಗೂ ತೆರಿಗೆ ರಿಯಾಯಿತಿ, ಎಸ್ಸಿ-ಎಸ್ಟಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿದೆ ಎಂದರು.
ಉತ್ತರ ಕರ್ನಾಟಕ ಪ್ರಾದೇಶಿಕ ಡಿಪಿಎಸ್ ತಾರಾ ವಿ., ಬಿಪಿಇಎಫ್ ಕಾರ್ಯದರ್ಶಿ ಅನಂತಕುಮಾರ ಪಾಲ್ ಮಾತನಾಡಿದರು. ಬಿಪಿಇಎ ಗ್ರೂಪ್ ಸಿ ಕರ್ನಾಟಕ ವಿಭಾಗೀಯ ಅಧ್ಯಕ್ಷ ಬಿ.ಜೆ. ಸುಂದರೇಶ, ಪೋಸ್ಟ್‌ಮನ್ ಕರ್ನಾಟಕ ವಿಭಾಗೀಯ ಅಧ್ಯಕ್ಷ ಅಮರವೆಂಕಟೇಶ, ಬಿಜಿಡಿಕೆಎಸ್ ಕರ್ನಾಟಕ ವಿಭಾಗೀಯ ಅಧ್ಯಕ್ಷ ಎನ್.ಸಿ. ವಿಜಯಕುಮಾರ, ಬಿಪಿಇಎಫ್ ಸಂಘಟನಾ ಕಾರ್ಯದರ್ಶಿ ಸಂತೋಷಕುಮಾರ ಸಿಂಗ್, ಎಂ.ಪಿ. ಸಿಂಗ್, ಡಿ. ಚಂದ್ರಶೇಖರ, ರಾಜೇಂದ್ರಕುಮಾರ, ಸುಶೀಲಕುಮಾರ, ಚಂದ್ರಶೇಖರ ಕಾಕುಮನ್, ಸಂದೇಶ ಮಹಾದೇವಪ್ಪ, ಚಂದ್ರಕಾಂತ ಕಾಮತ್, ರವಿ ಕುಲಕರ್ಣಿ ಸೇರಿದಂತೆ ಹಲವರಿದ್ದರು.