ಸಾರಾಂಶ
ಹುಬ್ಬಳ್ಳಿ:
ಶತಮಾನ ಕಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯನ್ನು ದುಷ್ಕರ್ಮಿಗಳು ಸೋಮವಾರ ತಡರಾತ್ರಿ ಒಡೆದು ಹಾಕಿದ್ದು, ಈ ಜಾಗ ಕಬಳಿಸುವ ಹುನ್ನಾರದಿಂದಲೇ ಶಾಲೆ ಬೀಳಿಸುವ ಸಂಚು ನಡೆಯುತ್ತಿದೆ ಎಂದು ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಗಿರಣಿಚಾಳದ ಮೈದಾನದಲ್ಲಿದ್ದ 138 ವರ್ಷಗಳ ಹಿನ್ನೆಲೆ ಹೊಂದಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬೇರೆಡೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. 2013ರಲ್ಲಿ ಯಾರೋ ಓರ್ವರು ಶಾಲೆ ಹಾಗೂ ಮುಂಭಾಗದಲ್ಲಿರುವ ಮೈದಾನದ ನಕಲಿ ದಾಖಲೆ ಸೃಷ್ಟಿಸಿಕೊಂಡು ಬಂದು ಶಾಲೆ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು. ಈ ವಿಷಯ ತಿಳಿದು ಈ ಭಾಗದ ಸಾರ್ವಜನಿಕರು ಹಾಗೂ ಇದೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಯಾವುದೇ ಕಾರಣಕ್ಕೂ ಈ ಶಾಲೆ ಬೇರೆಡೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಅಂದಿನಿಂದ ಸುಮ್ಮನಾಗಿದ್ದರು. ಈಗ ಈ ಶಾಲೆಯ ಕೊಠಡಿ ಬೀಳಿಸುವಲ್ಲಿ ಇವರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲಾ ಕೊಠಡಿ ಬೀಳಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ ಧ್ವಂಸಗೊಂಡ ಶಾಲೆ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಈ ಶಾಲೆ ಸ್ಥಳಾಂತರಿಸಲು, ಈ ಜಾಗ ಕಬಳಿಸಲು ಯತ್ನಿಸಿದರೆ ಅಂಥವರನ್ನು ಸುಮ್ಮನೆ ಬಿಡುವುದಿಲ್ಲ. ಯಾರೇ ಆಗಲಿ ಈ ಕೃತ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.ಶಾಲೆಯ ಹಳೆಯ ವಿದ್ಯಾರ್ಥಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಇಂತಹ ಘಟನೆ ನಡೆದಿರುವುದು ತೀವ್ರ ನೋವು ತಂದಿದೆ. ಈ ಕೃತ್ಯ ಮಾಡಿದವರು ಯಾರೇ ಆಗಲಿ ಅವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ಕಾರಣಕ್ಕೂ ಈ ಶಾಲೆಯಾಗಲಿ, ಮುಂದಿನ ಮೈದಾನವಾಗಲಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಈಗ ಬಿದ್ದಿರುವ ಶಾಲೆ ದುರಸ್ತಿಗೊಳಿಸಬೇಕು. ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಜಿ ಸಚಿವರು ಕಲಿತ ಶಾಲೆಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಸೇರಿದಂತೆ ಹಲವರು ಇದೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು. ಈಚೆಗೆ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಆ. 15ರಂದು ಶಾಲೆಗೆ ಬಣ್ಣ ಹಚ್ಚಿ ಸುಂದರಗೊಳಿಸಿದ್ದರು. ಶಾಲೆಯ ಗೋಡೆಗಳಿಗೆ ಶಿಕ್ಷಣದ ಮೌಲ್ಯ ಸಾರುವ ಬರಹ ಬರೆಯಿಸಿ ಸುಂದರಗೊಳಿಸಿ ಅದ್ಧೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದರು.ಸೋಮವಾರ ಸಂಜೆ ವರೆಗೂ ಇಲ್ಲಿ ತರಗತಿ ನಡೆಸಲಾಗಿದೆ. ಎಲ್ಲವೂ ಚೆನ್ನಾಗಿತ್ತು. ಮಂಗಳವಾರ ಬೆಳಗ್ಗೆ ಬಂದು ನೋಡಿದಾಗ ಯಾರೋ ದುಷ್ಕರ್ಮಿಗಳು ಶಾಲಾ ಕಟ್ಟಡದ ಗೋಡೆ ಧ್ವಂಸ ಮಾಡಿದ್ದಾರೆ. ಇದನ್ನು ನೋಡಿ ನನಗೆ ತುಂಬಾ ನೋವಾಗುತ್ತಿದೆ ಎಂದು ಮುಖ್ಯಗುರು ಅನಸೂಯಾ ಕಬ್ಬೇರ ಹೇಳಿದರು.
ಶಾಲೆಯ ಕೊಠಡಿ ಧ್ವಂಸಗೊಳಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ದುಷ್ಕೃತ್ಯ ನಡೆಸಿದವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುವಂತೆ ಸ್ಥಳೀಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿಇಒ ಚನ್ನಪ್ಪಗೌಡ್ರ ತಿಳಿಸಿದರು.