ಜೀವನಶೈಲಿ ಬದಲಿಸಿಕೊಂಡರೆ ರೋಗಗಳು ದೂರಾಗುತ್ತವೆ

| Published : Jul 25 2025, 12:30 AM IST

ಜೀವನಶೈಲಿ ಬದಲಿಸಿಕೊಂಡರೆ ರೋಗಗಳು ದೂರಾಗುತ್ತವೆ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನಶೈಲಿ ಸರಿ ಮಾಡಿಕೊಂಡರೆ ಅನೇಕ ರೋಗಗಳು ದೂರವಾಗುತ್ತವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. . ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಯುವಜನರು ಹೆಚ್ಚಾಗಿ ಈ ಸಮಸ್ಯೆಗೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ನಿತ್ಯವೂ ನಮ್ಮನ್ನು ಕಾಡುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಜೀವನ ಕ್ರಮವೇ ಆಗಿದೆ ಎಂದು ಅವರು ಹೇಳಿದರು. ಹೃದಯದ ಆರೋಗ್ಯ ಚೆನ್ನಾಗಿರಬೇಕು ಎಂದರೆ ಆರೋಗ್ಯಕರ ಆಹಾರ ಪದ್ಧತಿಯನ್ನು ನಮ್ಮದಾಗಿಸಿಕೊಳ್ಳಬೇಕು. ವರ್ಷಕ್ಕೆ ಒಮ್ಮೆಯಾದರೂ ಹೃದಯದ ಪರೀಕ್ಷೆ ಮಾಡಿಸಿಕೊಳ್ಳುವುದು, ದೇಹದ ತೂಕ ಹಾಗೂ ಬೊಜ್ಜನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜೀವನಶೈಲಿ ಸರಿ ಮಾಡಿಕೊಂಡರೆ ಅನೇಕ ರೋಗಗಳು ದೂರವಾಗುತ್ತವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಅವರು ಪಟ್ಟಣದ ೪೦ ಅಡಿ ಅಂಜನೇಯ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹೃದಯಾಘಾತ ಪ್ರಕರಣ ತಡೆಗೆ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ, ಹೃದಯಕ್ಕೆ ಹೆಜ್ಜೆ ಹಾಕೋಣ ಎಂಬ ಬೃಹತ್ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಯುವಜನರು ಹೆಚ್ಚಾಗಿ ಈ ಸಮಸ್ಯೆಗೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ನಿತ್ಯವೂ ನಮ್ಮನ್ನು ಕಾಡುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಜೀವನ ಕ್ರಮವೇ ಆಗಿದೆ ಎಂದು ಅವರು ಹೇಳಿದರು.

ಜೀವನಶೈಲಿ ಏರುಪೇರಾದರೆ ಆರೋಗ್ಯವೂ ಕೆಡುತ್ತದೆ. ಇದರಿಂದ ಹೊರ ಬರುವುದು ಕಷ್ಟವೇನಲ್ಲ. ಜೀವನಕ್ರಮದಲ್ಲಿ ಒಂದಷ್ಟು ಸುಧಾರಣೆ ಮಾಡಿಕೊಂಡರೆ ಸಾಕು. ಒಂದು ಶಿಸ್ತಿನ ಜೀವನ, ಕ್ರಮಬದ್ಧವಾದ ಬದುಕು, ಮನೆಯ ಆಹಾರ, ವ್ಯಾಯಾಮ, ಸರಿಯಾದ ಸಮಯಕ್ಕೆ ಮಲಗಿ, ಬೆಳಗ್ಗೆ ಬೇಗ ಏಳುವುದು, ಧ್ಯಾನ ಮಾಡುವುದು- ಇವುಗಳಿಂದ ನಮ್ಮ ಮನಸ್ಸು, ದೇಹವನ್ನು ಚಟುವಟಿಕೆಯಿಂದ ಇರಿಸಿಕೊಳ್ಳಬಹುದು. ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಲು ನಾವೇ ಮುಂದಾಗಬೇಕು ಎಂದರು.

ಹೃದಯಾಘಾತಕ್ಕೆ ದೈನಂದಿನ ಒತ್ತಡದ ಜೀವನಶೈಲಿ, ಅತಿಯಾದ ಅಪೇಕ್ಷೆಗಳು, ಆಹಾರಕ್ರಮ, ಶ್ರಮ ರಹಿತ ದಿನಚರಿಗಳೇ ಕಾರಣ. ಇದರೊಂದಿಗೆ ವಂಶವಾಹಿ ಸಮಸ್ಯೆಗಳೂ ಕಾರಣವಾಗಬಹುದು. ಇದರ ಹೊರತಾಗಿ ಮಧುಮೇಹ, ಹೈ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡದ ಸಂಬಂಧಿ ಸಮಸ್ಯೆಗಳು ಬಹಳ ಬೇಗನೆ ಕಾಣಿಸಿಕೊಳ್ಳುತ್ತವೆ. ಹೃದಯದ ಆರೋಗ್ಯ ಚೆನ್ನಾಗಿರಬೇಕು ಎಂದರೆ ಆರೋಗ್ಯಕರ ಆಹಾರ ಪದ್ಧತಿಯನ್ನು ನಮ್ಮದಾಗಿಸಿಕೊಳ್ಳಬೇಕು. ವರ್ಷಕ್ಕೆ ಒಮ್ಮೆಯಾದರೂ ಹೃದಯದ ಪರೀಕ್ಷೆ ಮಾಡಿಸಿಕೊಳ್ಳುವುದು, ದೇಹದ ತೂಕ ಹಾಗೂ ಬೊಜ್ಜನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. ಹೃದಯಕ್ಕೆ ಮಾರಕವಾಗಿರುವ ಅಭ್ಯಾಸಗಳಿಂದ ದೂರವಿರುವುದು ನಮ್ಮ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತವೆ ಎಂದು ತಿಳಿಸಿದರು.ತಹಸೀಲ್ದಾರ್‌ ಜಿ.ಎಸ್. ಶಂಕರಪ್ಪ ಮಾತನಾಡಿ, ಹೃದಯಾಘಾತ ತಡೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಸದೃಢರಾಗಬೇಕು, ಎಣ್ಣೆ ರಹಿತ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು, ಧೂಮಪಾನ, ಮದ್ಯಪಾನ ತ್ಯಜಿಸಬೇಕು, ಮಾದಕ ವಸ್ತುಗಳನ್ನು ದೂರ ಇಡಬೇಕು. ವ್ಯಾಯಾಮ, ಧ್ಯಾನ, ಪ್ರಾಣಾಯಾಮ ರೂಢಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯುವರಾಜ್ ಮಾತನಾಡಿ, ಹೃದಯವು ದೇಹದ ಪ್ರಮುಖ ಅಂಗ, ಅದರ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯ. ಹೃದಯ ಸೂಕ್ತವಾಗಿ ಕೆಲಸ ಮಾಡಬೇಕು ಎಂದರೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿದೆ ಎಂದರು. ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡ ವಾಕಥಾನ್, ಹಳೇ ಬಸ್‌ ನಿಲ್ದಾಣ, ಬಾಗೂರು ರಸ್ತೆ, ಕೋಟೆ ಮಾರ್ಗವಾಗಿ ಚನ್ನರಾಯಪಟ್ಟಣದ ಹೊಸ ಬಸ್ ನಿಲ್ದಾಣದ ಮೂಲಕ ಚಲಿಸಿತು. ನವೋದಯ ಶಾಲೆ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಲಾಯಿತು. ನಂತರ ಮೈಸೂರು ರಸ್ತೆಯ ಪುಣ್ಯ ಆಸ್ಪತ್ರೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಿಂದ ಸಾಗಿ ಮತ್ತೆ ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು. ಮಾರ್ಗದ ಉದ್ದಕ್ಕೂ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.ಪುರಸಭಾಧ್ಯಕ್ಷ ಮೋಹನ, ಮುಖ್ಯಾಧಿಕಾರಿ ಯತೀಶ್‌ ಕುಮಾರ್, ತಾಪಂ ಇಒ ಹರೀಶ್, ಜಿಲ್ಲಾ ಡಿವಿಡಿಸಿಪಿ ಅಧಿಕಾರಿ ಡಾ. ನಾಗಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ. ಪಿ.ತೇಜಸ್ವಿನಿ, ಸಾರ್ವಜನಿಕ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ಯುವರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್, ಖಜಾಂಚಿ ಮಂಜುನಾಥ್, ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ, ಬಿ. ವಿ. ವಿಜಯ್, ನವೀನ್‌ಕುಮಾರ್, ರೆಡ್‌ಕ್ರಾಸ್ ಸಂಸ್ಥೆಯ ಛೇರ್‍ಮನ್ ಭರತ್‌ಕುಮಾರ್, ಗಜಾನನ ಮನೋಹರ್, ಜಬೀಉಲ್ಲಾಬೇಗ್, ಯಶೋಧ ಜೈನ್, ಕಲ್ಕೆರೆ ಮೋಹನ್, ರಾಜು, ಕೆಂಚೇಗೌಡ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.