ಶಾಸಕ ಹರೀಶ್‌ ಪೂಂಜಾ ವಿರುದ್ಧದ ಕೇಸ್‌: ಜನಪ್ರತಿನಿಧಿ ನ್ಯಾಯಾಲಯಕ್ಕೆ ಶಾಸಕರ ಸಹಿತ 40 ಮಂದಿ ಮೇಲೆ ಆರೋಪಪಟ್ಟಿ

| Published : May 29 2024, 12:46 AM IST

ಶಾಸಕ ಹರೀಶ್‌ ಪೂಂಜಾ ವಿರುದ್ಧದ ಕೇಸ್‌: ಜನಪ್ರತಿನಿಧಿ ನ್ಯಾಯಾಲಯಕ್ಕೆ ಶಾಸಕರ ಸಹಿತ 40 ಮಂದಿ ಮೇಲೆ ಆರೋಪಪಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣದ ತನಿಖೆಗಾಗಿ ಎಸ್‌ಪಿ ಅವರಿಂದ ನೇಮಕಗೊಂಡ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳ ತ್ವರಿತ ತನಿಖೆ ನಡೆಸಿದ ಪೊಲೀಸರು ಶಾಸಕರ ಸಹಿತ 40 ಮಂದಿ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸೋಮವಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದ ತನಿಖೆಗಾಗಿ ಎಸ್‌ಪಿ ಅವರಿಂದ ನೇಮಕಗೊಂಡ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ.

ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿಸಲ್ಪಟ್ಟ ಬಿಜೆಪಿ ಯುವ ಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮಾತ್ರವಲ್ಲದೆ ಪೊಲೀಸರ ವಿರುದ್ಧ ಅಸಂವಿಧಾನಿಕ ಪದ ಬಳಸಿ‌ ನಿಂದಿಸಿದ್ದರು ಎಂದು ಒಂದು ಪ್ರಕರಣ ದಾಖಲಾಗಿತ್ತು. ಈ ವಿಚಾರ ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ಬಳಿ ನಡೆದ ಪ್ರತಿಭಟನೆ ವೇಳೆ ಮತ್ತೆ ಶಾಸಕರು ಪೊಲೀಸರ ವಿರುದ್ಧವೇ ಹರಿಹಾಯ್ದ ಬಗ್ಗೆ ಎರಡನೇ ಕೇಸು ದಾಖಲಾಗಿತ್ತು. ಒಟ್ಟು ಪೊಲೀಸ್‌ ಠಾಣೆಯಲ್ಲಿ 58/2024, ಕಲಂ 143, 147, 341, 504, 506 ಜತೆಗೆ 149 ಐಪಿಸಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಶಾಸಕರಿಗೆ ನೋಟಿಸ್‌ ನೀಡಿ ಠಾಣೆಗೆ ವಿಚಾರಣೆಗೆ ಕರೆತರಲು ಪೊಲೀಸರು ಮನೆಗೆ ತೆರಳಿದ್ದ ವೇಳೆ ಅಲ್ಲಿಯೂ ಸಾವಿರಾರು ಮಂದಿ ಜಮಾಯಿಸಿ ಹೈ ಡ್ರಾಮಾ ನಡೆದಿತ್ತು. ಈ ಎರಡೂ ಪ್ರಕರಣಗಳ ತ್ವರಿತ ತನಿಖೆಗೆ ಎಸ್‌ಪಿ ಅವರು ನೇಮಕ ಮಾಡಿದ ತಂಡ ಇದೀಗ ತನಿಖೆ ಪೂರ್ತಿಗೊಳಿಸಿದ್ದು, ಶಾಸಕರು ಮಾತ್ರವಲ್ಲ ಆಗ ಠಾಣೆಯಲ್ಲಿ ಸೇರಿದ್ದ ಇತರೆ 40 ಮಂದಿ ವಿರುದ್ಧ ಕೂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಇದಲ್ಲದೆ ಕಳಂಜದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆಯುತ್ತಿದೆ. ಒಟ್ಟು ಎಂಟು ಪ್ರಕರಣಗಳು ಶಾಸಕ ಹರೀಶ್‌ ಪೂಂಜಾ ಮೇಲಿದೆ.