ಸಾರಾಂಶ
ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಲು ವಾಲ್ಮೀಕಿ ಸಮಾಜದ ಋಣ ಕೂಡ ನನ್ನ ಮೇಲಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿಕೆ
ಕನ್ನಡಪ್ರಭ ವಾರ್ತೆ ಕೊಪ್ಪಳನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಲು ವಾಲ್ಮೀಕಿ ಸಮಾಜದ ಋಣ ಕೂಡ ನನ್ನ ಮೇಲಿದೆ. ಸಮಾಜದ ಅಭಿವೃದ್ಧಿಗೆ ಅವರ ಜತೆ ಕೈಜೋಡಿಸಿ ಅವರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಸಹಕಾರ ಇಲಾಖೆಯಿಂದ ನೀಡುವ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ವಾಲ್ಮೀಕಿ ಸಮಾಜದ ಬಸವರಾಜ ಶಹಾಪುರ ಮತ್ತು ಕೊಪ್ಪಳ ನಾಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಾರ್ಕಂಡಯ್ಯ ಕಲ್ಲನ್ನವರ ನೇಮಕಗೊಂಡ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಪ್ಪಳದಲ್ಲಿ ವಾಲ್ಮೀಕಿ ಭವನದ ನಿರ್ಮಾಣಕ್ಕೆ ₹3.5 ಕೋಟಿ ಅನುದಾನ ಮೀಸಲಿಡಲಾಗಿದೆ. ಮೊದಲನೇ ಹಂತವಾಗಿ ₹1.50 ಕೋಟಿ ಅನುದಾನ ಮಂಜೂರು ಆಗಿದ್ದು, ಉಳಿದ ₹2 ಕೋಟಿ ಶೀಘ್ರದಲ್ಲಿ ಮಂಜೂರು ಮಾಡಿಸಿ, ವಾಲ್ಮೀಕಿ ಭವನ ಸುಸಜ್ಜಿತವಾಗಿ ನಿರ್ಮಾಣ ಮಾಡುವ ಕೆಲಸವನ್ನು ಸಮಾಜದ ಮುಖಂಡರ ಜತೆಗೂಡಿ ನೆರವೇರಿಸುತ್ತೇನೆ ಎಂದರು.ವಾಲ್ಮೀಕಿ ಸಮಾಜದ ಮುಖಂಡರು ಬಹುದಿನಗಳ ಬೇಡಿಕೆ ಆಗಿರುವ ಮಹರ್ಷಿ ವಾಲ್ಮೀಕಿ ಅವರ ಮೂರ್ತಿಯನ್ನೂ ಕೊಪ್ಪಳದಲ್ಲಿ ನಿರ್ಮಾಣ ಮಾಡಲು ಈಗಾಗಲೇ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಸೂಕ್ತವಾದ ಸ್ಥಳ ನೋಡಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ರಾಮಣ್ಣ ಕಲ್ಲನ್ನವರ್, ರಾಮಣ್ಣ ಚೌಡ್ಕಿ, ಬಸವರಾಜ ಶಹಾಪುರ, ಮಾರ್ಕಂಡಯ್ಯ ಕಲ್ಲಣ್ಣವರ್, ಶಿವಮೂರ್ತಿ ಗುತ್ತೂರ್, ಚನ್ನಪ್ಪ ನಾಯಕ್, ನವೋದಯ ವಿರೂಪಣ್ಣ, ಶರಣಪ್ಪ ಸಜ್ಜನ್, ರಾಮಣ್ಣ ಹಳ್ಳಿಕೇರಿ ಉಪಸ್ಥಿತರಿದ್ದರು.