ಸಾರಾಂಶ
ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ದರ್ಬೆ ವೃತ್ತದಿಂದ ಭಜನಾ ಸಂಕೀರ್ತನೆಯ ಮೂಲಕ ಮೆರವಣಿಗೆಯಲ್ಲಿ ದೇವಳದ ವಠಾರಕ್ಕೆ ಆಗಮಿಸಲಾಯಿತು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಭಜನೆ ನಿಂದಕರಿಗೆ ಸದ್ಭುದ್ಧಿ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಭಜನೆಯ ವಿರುದ್ಧ ನಿಂದನೆಯ ಮಾತುಗಳು ಹಿಂದಿನಿಂದಲೇ ಸಾಮಾನ್ಯವಾಗಿ ಬಂದಿದ್ದರೂ ಇದೀಗ ಮತ್ತೆ ಮರುಕಳಿಸುತ್ತಿದೆ. ಹಿಂದೂ ಸಮಾಜವರಿಂದಲೇ ಇಂತಹ ನಿಂದನೆಯ ಮಾತುಗಳು ಬರುತ್ತಿರುವುದು ಖೇದಕರ ವಿಚಾರ. ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲ ಮಾಡುವವರಿಗೆ ಕಾನೂನಿನ ಶಿಕ್ಷೆ ಪಾಠ ಆಗಬೇಕು. ಇಡೀ ಸ್ತ್ರೀ ಕುಲದ ನಿಂದನೆಗೆ ಪ್ರತಿರೋಧ ತೋರುವ ಮೂಲಕ ದೊಡ್ಡ ಸಂದೇಶವನ್ನು ನಿಂದಕರಿಗೆ ನೀಡುವ ಕೆಲಸಗಳು ನಡೆಯಬೇಕು ಎಂದು ಉಜಿರೆ ಎಸ್‌ಡಿಎಂಸಿ ಕಾಲೇಜಿನ ಉಪನ್ಯಾಸಕಿ ಹರಿಣಿ ಪುತ್ತೂರಾಯ ಹೇಳಿದರು.ಪುತ್ತೂರಿನ ಭಜನಾ ಪರಿಷತ್ ಹಾಗೂ ಪುತ್ತೂರಿನ ವಿವಿಧ ಹಿಂದೂ ಸಂಘಟನೆಗಳ ಮತ್ತು ಭಜಕರ ಸಹಕಾರದಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಭಾನುವಾರ ನಡೆದ ‘ಭಜಕರ ಬೃಹತ್ ಸಮಾವೇಶ’ದಲ್ಲಿ ಅವರು ಉಪನ್ಯಾಸ ನೀಡಿದರು. ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಅವರು ಮಾತನಾಡಿ, ಪಬ್‌ನಲ್ಲಿ ಕುಡಿದು ಕುಣಿಯುವವರ ಬಗ್ಗೆ ಮಾತನಾಡದವರು ಭಜನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಪುತ್ತೂರು ತಾಲೂಕು ಭಜನ ಪರಿಷತ್ ಕಾರ್ಯಾಧ್ಯಕ್ಷ ಧನ್ಯಕುಮಾರ್ ಬೆಳಿಯೂರು, ಭಜನಾ ಪರಿಷತ್ ಸಮನ್ವಯಕಾರ ಸಂತೋಷ್ ಕುಮಾರ್, ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.ಪುತ್ತೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಎಂ. ವಂದಿಸಿದರು. ರಾಜೇಶ್ ಬನ್ನೂರು ನಿರೂಪಿಸಿದರು.
ಮೆರವಣಿಗೆ- ಪ್ರಾರ್ಥನೆ: ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ದರ್ಬೆ ವೃತ್ತದಿಂದ ಭಜನಾ ಸಂಕೀರ್ತನೆಯ ಮೂಲಕ ಮೆರವಣಿಗೆಯಲ್ಲಿ ದೇವಳದ ವಠಾರಕ್ಕೆ ಆಗಮಿಸಲಾಯಿತು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಭಜನೆ ನಿಂದಕರಿಗೆ ಸದ್ಭುದ್ಧಿ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಭಜಕರ ಸಹಿ ಸಂಗ್ರಹಿಸಿ ಭಜನೆ ನಿಂದಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ಕಚೇರಿಯ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.