ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕನ್ನಡ ಭಾಷೆ ಸಂಪನ್ನವಾಗಲು ಬಾಲ್ಯದಿಂದಲೇ ಮಕ್ಕಳು ನಾಡು, ನುಡಿ, ಸಂಸ್ಕೃತಿ ಮೇಲೆ ಪ್ರೀತಿ, ಗೌರವವನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಕೆ.ಎನ್.ಚಂದ್ರಮೋಹನ್ ತಿಳಿಸಿದರು.ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಶಾಲೆಗೊಂದು ಕಾರ್ಯಕ್ರಮದಲ್ಲಿ ಮಾತನಾಡಿ, ಹರಿದು ಹೋಗಿದ್ದ ಕನ್ನಡಿಗರನ್ನೆಲ್ಲ ಒಂದೆಡೆ ಸೇರಿಸಿ 1956ರಲ್ಲಿ ಮೈಸೂರು ಪ್ರಾಂತ್ಯವಾಗಿಸಲಾಯಿತು. ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರು ದೊಡ್ಡ ಸಾಧಕರಾಗಿದ್ದು, ಇವರಂತೆ ಮಕ್ಕಳು ಕೂಡ ಸಾಧಕರಾಗಲು ಕನ್ನಡ ಭಾಷೆಯಲ್ಲಿ ಹಿಡಿತವನ್ನು ಸಂಪಾದಿಸಬೇಕು ಎಂದರು.
ಉತ್ತರ ಕರ್ನಾಟಕದಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅನೇಕತೆಯಲ್ಲಿ ಏಕತೆ ಕಾಣುವ, ಎಲ್ಲರನ್ನು ಪ್ರೀತಿಸುವ ನಾಡು ನಮ್ಮ ರಾಜ್ಯವಾಗಿದೆ ಎಂದರು.ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳಿಸಿರುವ ನಮ್ಮ ರಾಜ್ಯದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದು, ಹಲ್ಮಿಡಿ ಶಾಸನ, ಬ್ರಹ್ಮಗಿರಿ ಅಶೋಕನ ಶಾಸನ ಕನ್ನಡದ ಹಿರಿತನವನ್ನು ಎತ್ತಿ ಹಿಡಿದಿದೆ. ಅನ್ಯ ಭಾಷಿಗರು ನಾಡಿನ ಉದ್ದಗಲಕ್ಕೂ ಇದ್ದು, ಸಹೃದಯ ಪ್ರಿಯರು ಕನ್ನಡಿಗರು ಎನ್ನುವುದಕ್ಕೆ ಇದು ಪುಷ್ಟಿ ನೀಡಿದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸದ ಜೊತೆ ನಮ್ಮ ಭಾಷೆಯನ್ನು ಮೊದಲು ಪ್ರೀತಿಸುವ ಮನೋಭಾವ ರೂಢಿಸಬೇಕು ಎಂದು ನುಡಿದರು.
ಕನ್ನಡ ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಸ್ವಯಂಪ್ರೇರಣೆಯಿಂದ ಚಂದ್ರಮೋಹನ್ ನೆನಪಿನ ಕಾಣಿಕೆ ನೀಡಿ ಖುಷಿಪಡಿಸಿದರು. ಮುಖ್ಯಶಿಕ್ಷಕರಾದ ನಟರಾಜು, ಲವಣ್ಣ, ಪುಟ್ಟಪ್ಪ, ಮುಖಂಡ ಮಹದೇವು ಮತ್ತಿತರರಿದ್ದರು.ಇಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆಮಂಡ್ಯ: ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನ.25 ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸೀಫ್ ಆಗಮಿಸುವರು. ನ.27 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಮೈಸೂರು ದಕ್ಷಿಣ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ.ಬಿ.ಬೋರಲಿಂಗಯ್ಯ ಆಗಮಿಸಲಿದ್ದಾರೆ.