ರಾಮನಗರ: ಐತಿಹಾಸಿಕ ಹಿನ್ನೆಲೆಯುಳ್ಳ ನಗರದ ಪೀರನ್ ಷಾ ವಲಿ ದರ್ಗಾದ ಜೀರ್ಣೋದ್ಧಾರಕ್ಕಾಗಿ ನಗರಸಭೆಯಿಂದ 10 ಲಕ್ಷ ರು. ಸಹಾಯಧನದ ಚೆಕ್ ಅನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಯವರು ದರ್ಗಾ ಸಮಿತಿ ಅಧ್ಯಕ್ಷ ಅಜ್ಮತ್ ಉಲ್ಲಾ ಖಾನ್ ಅವರಿಗೆ ವಿತರಿಸಿದರು.

ಈ ವೇಳೆ ಮಾತನಾಡಿದ ಕೆ.ಶೇಷಾದ್ರಿ, ಪೀರನ್ ಷಾ ವಲಿ ದ್ರಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬಿತ್ತುವ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ. ರಾಮನಗರದ ಸರ್ವ ಧರ್ಮದ ಜನರನ್ನು ಒಟ್ಟುಗೂಡಿಸುವ ಪ್ರಮುಖ ಭಾವೈಕ್ಯತೆಯ ಕೇಂದ್ರ ಎಂದು ಬಣ್ಣಿಸಿದರು.

ಕಳೆದ 260 ವರ್ಷಗಳಿಂದಲೂ ಈ ದರ್ಗಾ ಬಾಬಯ್ಯನ ದರ್ಗಾ ಎಂದೇ ಪ್ರಸಿದ್ದಿ ಪಡೆದಿದೆ. ಪುರಾತನ ಕಾಲದಿಂದಲೂ ದರ್ಗಾಕ್ಕೆ ಜಾತಿ ಭೇಧವಿಲ್ಲದೆ ಹಿಂದೂ ಭಾಂಧವರು ಬಂದು ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ನಗರಸಭೆ ಈ ನಡೆ ಕೇವಲ ಒಂದು ಕಟ್ಟಡದ ಅಭಿವೃದ್ಧಿಗೆ ಸೀಮಿತವಾಗಿರದೆ, ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ಆಣತಿಯಂತೆ ಪ್ರಮುಖ ಚಿಂತನೆ ನಡೆಸಿ ನಗರದ ನಗರದೇವತೆ ಮಂಡೀಪೇಟೆಯ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ಚೆಕ್ ಅನ್ನು ನೀಡಲಾಗಿದೆ. ಅದೇ ರೀತಿ ದರ್ಗಾಕ್ಕೂ 10 ಲಕ್ಷ ರು.ಗಳ ಸಹಾಯಧನ ನೀಡಲಾಗುತ್ತಿದೆ ಎಂದರು.

ನಗರಸಭೆ ಸದಸ್ಯ ನಿಜಾಮುದ್ದೀನ್ ಷರೀಫ್ ಮಾತನಾಡಿ, ಈ ದರ್ಗಾದ ಕಟ್ಟಡವನ್ನು ನವೀನ ಶೈಲಿಯಲ್ಲಿ ವಿಶೇಷ ಪ್ರಾರ್ಥನಾ ಸಭಾ ಸೇರಿದಂತೆ ವಿಶಾಲವಾಗಿ ನಿರ್ಮಾಣ ಮಾಡಲಾಗುತ್ತಿದೆ. ದರ್ಗಾ ಕೇವಲ ಒಂದು ಧಾರ್ಮಿಕ ಕ್ಷೇತ್ರವಲ್ಲ ಇದು ಜಾತಿ-ಮತ ಧರ್ಮಗಳ ಬೇಧವಿಲ್ಲದೆ ಸಹಸ್ರಾರು ಭಕ್ತರನ್ನು ಕೈಬೀಸಿ ಕರೆಯುವ ಮಹತ್ವದ ಭಾವೈಕ್ಯ ಕೇಂದ್ರವಾಗಿದೆ ಎಂದರು.

ದರ್ಗಾ ಕಮಿಟಿ ಕಾರ್ಯದರ್ಶಿ ಸೈಯದ್ ಲಿಯಾಕತ್, ಉಪಾಧ್ಯಕ್ಷ ಮುಸ್ತಾಕ್ ಅಹಮ್ಮದ್, ನಗರಸಭೆ ಆಯುಕ್ತ ಡಾ. ಜಯಣ್ಣ, ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಆರಿಫ್, ಸದಸ್ಯರಾದ ಅಕ್ಲೀಂ, ಅಜ್ಮತ್, ಸಮದ್, ವಿಜಯಕುಮಾರಿ, ಆಯಿಷಾಬಾನು, ಪಾರ್ವತಮ್ಮ, ಪವಿತ್ರ, ಮಂಜುಳಾ, ಮಹಾಲಕ್ಷ್ಮೀ, ನಾಗಮ್ಮ ಸೋಮಶೇಖರ್, ಮುತ್ತರಾಜು ಹಾಜರಿದ್ದರು.11ಕೆಆರ್ ಎಂಎನ್ 2.ಜೆಪಿಜಿ


ರಾಮನಗರದ ಪೀರನ್ ಷಾ ವಲಿ ದರ್ಗಾ ಕಮಿಟಿ ಅಧ್ಯಕ್ಷ ಅಜ್ಮತ್ ಉಲ್ಲಾ ಖಾನ್ ಅವರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ 10 ಲಕ್ಷರು.ಗಳ ಸಹಾಯಧನ ಚೆಕ್ ವಿತರಿಸಿದರು.