ಹುಬ್ಬಳ್ಳಿ:

ಚೇತನ್‌ ಸಮೂಹ ಸಂಸ್ಥೆಗಳ ವತಿಯಿಂದ ನ. 7ರಂದು ಬೆಳಗ್ಗೆ 10.30ಕ್ಕೆ ಚೇತನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 2025-26ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಇಲ್ಲಿನ ತಾಜ್‌ನಗರದ ಬಳಿಯ ಚೇತನ್‌ ಬಿಸಿನೆಸ್‌ ಸ್ಕೂಲ್‌ನ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಡಾ. ವಿ.ಎಂ. ಕೊರವಿ ಹೇಳಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಡಿಕೆಎಸ್‌ ಎಜ್ಯುಕೇಶನ್‌ ಟ್ರಸ್ಟ್‌ ಅಡಿಯಲ್ಲಿ ಸ್ಥಾಪನೆಯಾದ ಚೇತನ ಸಮೂಹ ಸಂಸ್ಥೆಗಳು ಬಿಕಾಂ, ಬಿಬಿಎ, ಬಿಸಿಎ, ಎಂಸಿಎ ಹಾಗೂ ಇತರೆ ಕೋರ್ಸ್‌ಗಳನ್ನು ಹೊಂದಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದರು.

ಸಂಸ್ಥೆಯು ವಿದ್ಯಾರ್ಥಿಗಳಿಗೆ ಉದ್ಯೋಗದ ನೆರವು ವ್ಯವಸ್ಥೆಯನ್ನು ರೂಪಿಸಿದ್ದು, ಅನೇಕ ಯುವ ಪದವೀಧರರಿಗೆ ತಕ್ಕ ಉದ್ಯೋಗ ದೊರೆಯಲು ಪ್ರಾದೇಶಿಕ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಮುರುಘಾಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀ ಸಾನ್ನಿಧ್ಯ ವಹಿಸಲಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಸಂಸದರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಎನ್‌.ಎಚ್‌. ಕೋನರಡ್ಡಿ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ವಿಧಾನ ಪರಿಷತ್‌ ಸಭಾಪತಿ ಸಲೀಂಅಹ್ಮದ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರ, ಲಿಂಗರಾಜ ಪಾಟೀಲ, ಪ್ರದೀಪ ಶೆಟ್ಟರ್‌, ಎಫ್‌.ಎಚ್‌.ಜಕ್ಕಪ್ಪನವರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.


ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ:

ಇದೇ ವೇಳೆ 2025 ಮತ್ತು 2026ನೇ ಸಾಲಿನ ಚೇತನಶ್ರೀ ಪ್ರಶಸ್ತಿ ಪ್ರದಾನ ಕೂಡ ಮಾಡಲಾಗುವುದು. 2025ನೇ ಸಾಲಿನ ಪ್ರಶಸ್ತಿಯನ್ನು ಪ್ರಗತಿಪರ ರೈತ ಮಹಿಳೆ ಮತ್ತು ಕೃಷಿ ಉದ್ಯಮಿ ಕವಿತಾ ಮಿಶ್ರಾ ಅವರಿಗೆ, 2026ನೇ ಸಾಲಿನ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಹಾಗೂ ಕೃಷಿ ಉಪಕರಣಗಳ ಉದ್ಯಮಿ ಅಬ್ದುಲಖಾದರ್ ನಡಕಟ್ಟಿನ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷದಿಂದ ಚೇತನಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಈ ಹಿಂದೆ ವಿಜಯ ಸಂಕೇಶ್ವರ, ಎಂ.ಎಂ. ಜೋಶಿ, ಭರತ ಖಿಮ್ಜಿ, ಚಂದ್ರಕಾಂತ ಬೆಲ್ಲದ ಅವರಿಗೆ ನೀಡಲಾಗಿತ್ತು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸೇರಿದಂತೆ ಅನೇಕರಿದ್ದರು.