ಸಾರಾಂಶ
ಬೆಂಗಳೂರು : ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಪೂರ್ಣಪ್ರಮಾಣದ ಅನುದಾನ ಬಿಡುಗಡೆಯಾಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನುದಾನ ಬಿಡುಗಡೆ ಕುರಿತು ಕೇಂದ್ರದ ಮೇಲೆ ಒತ್ತಡ ಹೇರಲು ಅಧಿಕಾರಿಗಳು ಮತ್ತು ದಿಶಾ ಸಮಿತಿ ಸದಸ್ಯರಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನ, ಅನುದಾನದ ಮಾಹಿತಿ ಪಡೆದರು.
ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಬಹುತೇಕ ಹಣ ಕೊಡುವ ಯೋಜನೆಗಳಿಗೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಹೆಸರಿದೆ. ಆದರೂ ಕೇಂದ್ರದಿಂದ ಹಣ ಬರುತ್ತಿಲ್ಲ. ಈ ನಿರಂತರ ಅನ್ಯಾಯ ಪ್ರಶ್ನಿಸಬೇಕು ಎಂದರಲ್ಲದೆ, ಅನುದಾನದ ವಿಚಾರವಾಗಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ, ಸಚಿವರಿಗೆ ಬರೆದ ಪತ್ರಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
₹11,495 ಕೋಟಿ ಬರಬೇಕು:
15ನೇ ಹಣಕಾಸು ಆಯೋಗದಿಂದ ಶಿಫಾರಸು ಮಾಡಲಾದ ವಿಶೇಷ ಅನುದಾನವನ್ನು ಈವರೆಗೆ ಕೇಂದ್ರ ಸರ್ಕಾರ ನೀಡಿಲ್ಲ. ಅದರಲ್ಲಿ ₹5,495 ಕೋಟಿ ಬರಬೇಕಿದೆ. ಅದರ ಜತೆಗೆ ಕೆರೆ ಮತ್ತು ಪೆರಿಫೆರಲ್ ರಿಂಗ್‌ರಸ್ತೆ ನಿರ್ಮಾಣಕ್ಕೂ ಅನುದಾನ ಕೊಡಬೇಕು. ಈ ಯೋಜನೆಗಳಿಗಾಗಿಯೇ ₹11,495 ಕೋಟಿ ಅನುದಾನ ಬರಬೇಕಿತ್ತು. ಆ ಅನುದಾನ ನೀಡುವ ಯಾವುದೇ ಪ್ರಕ್ರಿಯೆ ಕೇಂದ್ರ ಸರ್ಕಾರ ನಡೆಸಿಲ್ಲ.
ಅದರ ಜತೆಗೆ ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಅನುದಾನ ನೀಡುತ್ತಿಲ್ಲ. 2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ₹24,960 ಕೋಟಿ ನೀಡಿದ್ದು, ಕೇಂದ್ರ ಸರ್ಕಾರ ₹22,758 ಕೋಟಿ ಕೊಡಬೇಕಿತ್ತು. ಆದರೆ, ಕೇಂದ್ರ ಸರ್ಕಾರದಿಂದ ₹18,561 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ ₹4,195 ಕೋಟಿ ಬಿಡುಗಡೆ ಆಗಬೇಕು. ರಾಜ್ಯಕ್ಕೆ ನೀಡಬೇಕಿರುವ ಅನುದಾನ ಸರಿಯಾಗಿ ಕೊಡದಿದ್ದರೆ ಯೋಜನೆ ಅನುಷ್ಠಾನ ಸಮರ್ಪವಾಗಿ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದರು.
ನಾನೇ ಎರಡು ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಅನುದಾನ ನೀಡುತ್ತಿಲ್ಲ. ರಾಜ್ಯದ ಸಂಸದರು ಒಟ್ಟಾಗಿ ಆ ಹಣ ಕೊಡಿಸುವ ಕೆಲಸ ಮಾಡಬೇಕು. ವಿವಿಧ ಪಿಂಚಣಿ ಅಡಿ ರಾಜ್ಯ ಸರ್ಕಾರ ನಿರಂತರವಾಗಿ 5,665 ಕೋಟಿ ರು. ನೀಡುತ್ತಿದೆ. ಅದರಲ್ಲಿ ಕೇಂದ್ರ ಸರ್ಕಾರ ₹559 ಕೋಟಿ ಮಾತ್ರ ನೀಡಬೇಕು. ಕೇಂದ್ರ ಸರ್ಕಾರ ಅಷ್ಟು ಸಣ್ಣ ಮೊತ್ತವನ್ನೂ ನೀಡುತ್ತಿಲ್ಲ. ಕಳೆದೆರಡು ವರ್ಷಗಳಿಂದ ಅದನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದು ಸರಿಯಲ್ಲ ಎಂದರು.
ಜಲಜೀವನ್ ಮಿಷನ್ ಹಣವೂ ಬಾಕಿ:
ನರೇಗಾ ಕ್ರಿಯಾ ಯೋಜನೆಯನ್ನು ಮೂರು ತಿಂಗಳೊಳಗೆ ಕಡ್ಡಾಯವಾಗಿ ಸಿದ್ಧಪಡಿಸಬೇಕು. ಕಾರಣಾಂತರದಿಂದ ಹಿಂದಿನ ಕ್ರಿಯಾ ಯೋಜನೆ ಸಿದ್ಧವಾಗದಿದ್ದರೆ, ಅದನ್ನು ಮುಂದಿನ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡುವಂತೆ ಸಿದ್ದರಾಮಯ್ಯ ಸೂಚಿಸಿದರು.
ಈ ವೇಳೆ ನರೇಗಾ ಸೇರಿ ಇನ್ನಿತರ ಯೋಜನೆಗಳ ಅನುದಾನ ಕೇಂದ್ರದಿಂದ ನೀಡದ ಕುರಿತಂತೆ ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ರಾಷ್ಟ್ರೀಯ ಗ್ರಾಮೀನ ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ₹10,889 ಕೋಟಿ ಎರಡು ವರ್ಷಗಳಿಂದ ಬಂದಿಲ್ಲ. 2023-24ನೇ ಸಾಲಿನಲ್ಲಿ ₹7,656 ಕೋಟಿ, 2024-25ನೇ ಸಾಲಿನಲ್ಲಿ ₹3,233 ಕೋಟಿಗಳನ್ನು ಜಲಜೀವನ ಮಿಷನ್ ಯೋಜನೆ ಅಡಿ ಬಾಕಿ ಉಳಿಸಿಕೊಳ್ಳಲಾಗಿದೆ. ಇದು ಹೀಗೆ ಮುಂದುವರಿದರೆ ಯೋಜನೆ ಅನುಷ್ಠಾನ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಸದರಾದ ರಾಧಾಕೃಷ್ಣ, ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಶಾಸಕರಾದ ರಿಜ್ವಾನ್ ಅರ್ಷದ್, ಸಿಮೆಂಟ್ ಮಂಜು ಇದ್ದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖಾಂಶ:
*ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಸೇರಿ ಇತರ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲು ಶೇ. 90-100ರಿಂದ ಶೇ. 50-60ಕ್ಕೆ ಇಳಿಸಲಾಗಿದೆ
*2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ₹22,758 ಕೋಟಿ ಅನುದಾನ ನೀಡಬೇಕಿದ್ದು, 18,652 ಕೋಟಿ ರು. ಬಿಡುಗಡೆ ಮಾಡಿದೆ. ಇನ್ನೂ 4,196 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕಿದೆ
- ರಾಜ್ಯದ ಅನುದಾನವೂ ಸೇರಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2024-25ನೇ ಸಾಲಿನಲ್ಲಿ 46,859 ಕೋಟಿ ರು. ವೆಚ್ಚವಾಗಿದ್ದು, ಶೇ. 83ರಷ್ಟು ಪ್ರಗತಿಯಾಗಿದೆ
- ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ಸಾಮಾಜಿಕ ಭದ್ರತಾ ಪಿಂಚಣಿ, ಪ್ಯಾಕ್ಸ್ ಯೋಜನೆಗಳಿಗೆ ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ
- ನರೇಗಾ ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ ಕೇಂದ್ರದಿಂದ 2,200.40 ಕೋಟಿ ರು. ಹಂಚಿಕೆಯಾಗಿದ್ದು, 1,933.48 ಕೋಟಿ ರು. ಬಿಡುಗಡೆಯಾಗಿದೆ. ಇನ್ನೂ 266.92 ಕೋಟಿ ರು. ಬಿಡುಗಡೆ ಬಾಕಿ
- ಸ್ವಚ್ಛ ಭಾರತ ಅಡಿ 215.82 ಕೋಟಿ ರು. ಹಂಚಿಕೆಯಾಗಿದ್ದು 150 ಕೋಟಿ ರು. ಮಾತ್ರ ಬಿಡುಗಡೆಯಾಗಿದೆ. 65.82 ಕೋಟಿ ರು. ಬಿಡುಗಡೆ ಬಾಕಿ
-ಪಿಎಂಜಿಎಸ್‌ವೈ ಕಾರ್ಯಕ್ರಮದಡಿ 100 ಕೋಟಿ ರು.ಗಳಲ್ಲಿ 34.21 ಕೋಟಿ ರು. ನೀಡಲಾಗಿದ್ದು, ಇನ್ನೂ 65.73 ಕೋಟಿ ರು. ಬಿಡುಗಡೆಯಾಬೇಕಿದೆ
- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿ 398 ಕೋಟಿ ರು.ಗಳ ಪೈಕಿ 298.73 ಕೋಟಿ ರು. ಬಿಡುಗಡೆಯಾಗಿದ್ದು, 99.58 ಕೋಟಿ ರು. ಕೇಂದ್ರ ಸರ್ಕಾರ ನೀಡಬೇಕಿದೆ
- 15ನೇ ಹಣಕಾಸು ಆಯೋಗದಿಂದ ಶಿಫಾರಸು ಮಾಡಲಾದ ವಿಶೇಷ ಅನುದಾನ ಕೇಂದ್ರದಿಂದ ಬಂದಿಲ್ಲ
- ಬೆಂಗಳೂರಿನ ಕೆರೆ ಮತ್ತು ಪೆರಿಫೆರಲ್ ರಿಂಗ್‌ರಸ್ತೆ ನಿರ್ಮಾಣಕ್ಕೂ ಕೇಂದ್ರದಿಂದ ಅನುದಾನ ಬಂದಿಲ್ಲ
- 67 ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಅನುದಾನ ನೀಡುತ್ತಿಲ್ಲ, ರಾಜ್ಯವೇ ಹಣ ನೀಡುತ್ತಿದೆ
ಬಾಕಿ ಅನುದಾನಕ್ಕೆತೀವ್ರ ಒತ್ತಡ ಹೇರಿ : ಸಂದದರಿಗೆ ಸಿದ್ದುಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಹಣ ಬಿಡುಗಡೆಯಾಗುತ್ತಿಲ್ಲ. 2024-25ನೇ ಸಾಲಿನ ಕೇಂದ್ರದ ಪಾಲು ಇನ್ನೂ 4,195 ಕೋಟಿ ರು. ಬಿಡುಗಡೆ ಮಾಡಬೇಕಿದ್ದು, ರಾಜ್ಯದ ಸಂಸದರು ಕೇಂದ್ರವನ್ನು ಒತ್ತಾಯಿಸಿ ಬಾಕಿ ಅನುದಾನ ತರಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.