ನಮ್ಮದು ಪಾಪರ್ ಸರ್ಕಾರವಲ್ಲ, ಅಭಿವೃದ್ಧಿಪರ ಸರ್ಕಾರ : ಸಿಎಂ ಸಿದ್ದರಾಮಯ್ಯ

| N/A | Published : May 09 2025, 12:33 AM IST / Updated: May 09 2025, 03:10 AM IST

ಸಾರಾಂಶ

ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿ 148 ಲಕ್ಷ ಮೆಟ್ರಿಕ್‌ ಟನ್ ಆಹಾರ ಉತ್ಪಾದನೆಯಾಗಿದೆ. ಈ ಬಾರಿಯೂ ಉತ್ತಮ ಮಳೆಯಾಗುವ ಲಕ್ಷಣಗಳಿವೆ. 

 ಮಂಡ್ಯ : ನಮ್ಮದು ಪಾಪರ್ ಸರ್ಕಾರವಲ್ಲ. ಅಭಿವೃದ್ಧಿ ಪರ ಸರ್ಕಾರ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಬಿಜೆಪಿಯವರು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರು ಸೇರಿದಂತೆ ಯಾವುದೇ ವರ್ಗದ ಜನರ ಪರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಗುರುವಾರ ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ 53 ಸಾವಿರ ಕೋಟಿ ರು. ಖರ್ಚು ಮಾಡಿದ್ದರೆ ಈ ವರ್ಷ 50.18 ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದೇವೆ. ಆಸ್ತಿ ಸೃಜನೆ ಮಾಡುವುದಕ್ಕಾಗಿ ೮೩ ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ. ೧.೩೫ ಲಕ್ಷ ಕೋಟಿ ರು. ಹಣವನ್ನು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಪಾಪರ್ ಸರ್ಕಾರವಾಗಿದ್ದರೆ ಇದೆಲ್ಲವನ್ನೂ ಮಾಡಲಾಗುತ್ತಿತ್ತೆ ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು.

ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿ 148  ಲಕ್ಷ ಮೆಟ್ರಿಕ್‌ ಟನ್ ಆಹಾರ ಉತ್ಪಾದನೆಯಾಗಿದೆ. ಈ ಬಾರಿಯೂ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ಸಿದ್ದರಾಮಯ್ಯ ಕಾಲ್ಗುಣ ಚೆನ್ನಾಗಿಲ್ಲ ಎನ್ನುತ್ತಿದ್ದ ಬಿಜೆಪಿಯವರು ಈಗೇನಂತಾರೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರದಿಂದ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಜರಿದರು.

ಮಂಡ್ಯದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಲು ಕಾಂಗ್ರೆಸ್ ಕಾರಣ. ಅಂದು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದೆ. ಚಲುವರಾಯಸ್ವಾಮಿ ಆರೋಗ್ಯ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಯಿತು. ಕೆಲವರು ಮೆಡಿಕಲ್ ಕಾಲೇಜು ನಾನು ಕೊಟ್ಟಿದ್ದು ಎಂದು ಸುಳ್ಳು ಹೇಳುತ್ತಾರೆ. ಅದನ್ನು ನಂಬಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರೇಳದೆ ಕುಟುಕಿದರು.

ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿನಿಲಯ ನಿರ್ಮಾಣಗೊಂಡು ೭೦ ವರ್ಷವಾಗಿತ್ತು. ಕಟ್ಟಡ ಶಿಥಿಲವಾಗಿದ್ದರಿಂದ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ೨ ಕೋಟಿ ರು. ಹಣ ನೀಡಲಾಗಿದೆ. ಕನಿಷ್ಠ ೧೦೦ ಮಕ್ಕಳಿಗೆ ವಿದ್ಯಾರ್ಥಿನಿಲಯದಲ್ಲಿ ಸ್ಥಳಾವಕಾಶವಿರಬೇಕು. ಕೇವಲ ಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿನಿಲಯದಲ್ಲಿ ಅವಕಾಶ ನೀಡದೆ ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಅವಕಾಶ ಮಾಡಿಕೊಡುವಂತೆ ತಿಳಿಸಿದರು.

ಹಳ್ಳಿಗಾಡಿನ ವಿದ್ಯಾರ್ಥಿಗಳೂ ವಿದ್ಯಾವಂತರಾಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳೂ ವೈದ್ಯರು, ಎಂಜಿನಿಯರ್, ವಿಜ್ಞಾನಿಗಳು, ಪ್ರೊಫೆಸರ್‌ಗಳು ಸೇರಿದಂತೆ ಉನ್ನತಾಧಿಕಾರಿಗಳಾಗಬೇಕು. ಕೇವಲ ಒಂದು ವರ್ಗದ ಮಕ್ಕಳು ಮಾತ್ರ ವಿದ್ಯಾವಂತರಾದರೆ ಪ್ರಯೋಜನವಿಲ್ಲ ಎಂದು ಹೇಳಿದರು.

ಮೈಷುಗರ್ ಕಾರ್ಖಾನೆ ಆರಂಭಕ್ಕೆ 2023 ರಲ್ಲಿ50 ಕೋಟಿ ರು. ಹಣ ಕೊಟ್ಟೆ. ಅದರ ಹಿಂದೆಯೂ ಕಾರ್ಖಾನೆ ಕಾರ್ಯಾಚರಣೆಗೆ ಹಣ ನೀಡಿದ್ದೆ. ಮೈಷುಗರ್‌ನ ೫೦ ಕೋಟಿ ರು. ವಿದ್ಯುತ್ ಬಿಲ್ ಮನ್ನಾ ಮಾಡಿದ್ದೇನೆ. ಕೃಷಿ ವಿಶ್ವವಿದ್ಯಾಲಯ ಘೋಷಿಸಿ 25  ಕೋಟಿ ರು. ಹಣ ಮೀಸಲಿಟ್ಟಿದ್ದೇನೆ. ಡಿಸಿಸಿ ಬ್ಯಾಂಕ್ ಆಡಳಿತ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ವಿಶ್ವೇಶ್ವರಯ್ಯ ನಾಲಾ ಆಧುನೀಕರಣಕ್ಕೆ ಹಣ ದೊರಕಿಸಿದ್ದೇನೆ. ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿರುವ ಜನರು ಅನ್ನದಾತರು. ಅವರ ಕೃಷಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಜಿಲ್ಲೆಯ ಜನರ ಮೇಲ್ನೋಟಕ್ಕೆ ಒರಟು, ಗಡಸುತನದವರೆಂದು ಕಂಡುಬಂದರೂ ಇಲ್ಲಿನ ಜನರಲ್ಲಿ ಒಳ್ಳೆಯತನವಿದೆ. ಅಭಿವೃದ್ಧಿ ಕೆಲಸಗಳನ್ನು ಸ್ಮರಿಸುವ ಶಕ್ತಿ ಇದೆ ಎಂದು ಹೊಗಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಭೈರತಿ ಸುರೇಶ್, ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮರಿತಿಬ್ಬೇಗೌಡ, ಎನ್.ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸಚಿನ್ ಚಲುವರಾಯಸ್ವಾಮಿ ಡಿ.ನರಹರಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಇತರರಿದ್ದರು.

ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ: ಸಿದ್ದರಾಮಯ್ಯ

 ಮಂಡ್ಯ : ಬಜೆಟ್‌ನಲ್ಲಿ ಘೋಷಿಸಿದಂತೆ ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡುವ ವಿಷಯವನ್ನು ಕ್ಯಾಬಿನೇಟ್‌ಗೆ ತಂದು ಅನುಮೋದನೆ ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಗುರುವಾರ ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, 120   ಕೋಟಿ ರು. ವೆಚ್ಚದಲ್ಲಿ ಎಥೆನಾಲ್ ಪ್ಲಾಂಟ್, 60  ಕೋಟಿ ರು. ವೆಚ್ಚದಲ್ಲಿ ಬಾಯ್ಲಿಂಗ್ ಹೌಸ್, ಹೊಸ ಡಿಸ್ಟಿಲರಿ ಸ್ಥಾಪಿಸಲಾಗುವುದು. ಹೊಸ ಮಿಲ್ ಕಾರ್ಯಾಚರಣೆಯಲ್ಲಿರುವುದರಿಂದ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣವಾದಂತೆಯೇ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ: ಸಿಎಂಗೆ ಮನವಿ

  ಮಂಡ್ಯ : ರಾಜ್ಯದಲ್ಲಿನ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು ನೇತೃತ್ವದಲ್ಲಿ ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಪೌರನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಕೆಜಿಐಪಿ ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸುವುದು. ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು. ಸಮಾನ ಕೆಲಸಕ್ಕೆ ಸಮಾನ ವೇತನ, ಟೈಮ್ ಸ್ಕಿಲ್ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ವಿಲೀನ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಮಂಡ್ಯ ಜಿಲ್ಲಾ ಶಾಖೆಯ ಅಧ್ಯಕ್ಷ ಮಹದೇವು, ಗೌರವ ಅಧ್ಯಕ್ಷ ನಂಜುಂಡ, ಉಪಾಧ್ಯಕ್ಷ ಚಂದ್ರ, ಸೋಮಸುಂದರ್, ಹರೀಶ್, ಲಿಂಗಮಯಿ ಇದ್ದರು.