ಸಾರಾಂಶ
ಬೆಂಗಳೂರು : ಜಯನಗರದ ಕನಕನಪಾಳ್ಯದಲ್ಲಿರುವ ಪ್ರಸಿದ್ಧ ಪಟಾಲಮ್ಮ ದೇವಿಯ ರಥೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ಅಗ್ನಿಕೊಂಡೋತ್ಸವಕ್ಕೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕನಕನಪಾಳ್ಯದ ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ದೀಪದಾರತಿ, ಬೆಲ್ಲ, ತಂಬಿಟ್ಟಿನ ಆರತಿಯೊಂದಿಗೆ ದೇವರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. 25ಕ್ಕೂ ಹೆಚ್ಚು ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ವಿವಿಧ ದೇವರುಗಳ ಪೂಜಾ ಕುಣಿತ ಉತ್ಸವಕ್ಕೆ ಮೆರುಗು ತಂದುಕೊಟ್ಟವು. ರಾಜಬೀದಿ, ದೇವಾಲಯಗಳ ವಿದ್ಯುತ್ ದೀಪಾಲಂಕಾರ, ನೃತ್ಯಗಳು ಜನಮನ ಸೂರೆಗೊಳಿಸಿದವು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ನಗರೀಕರಣದ ಭರಾಟೆಯಲ್ಲಿಯೂ ನಗರ ಮತ್ತು ಪಟ್ಟಣದಲ್ಲಿ ದೇವರ ಉತ್ಸವ, ಊರ ಹಬ್ಬ, ರಥೋತ್ಸವ, ಜಾನಪದ ಉತ್ಸವಗಳು ಅದ್ಧೂರಿಯಿಂದ ಮತ್ತು ಅಚ್ಚುಕಟ್ಟಾಗಿ ನಡೆಯುತ್ತಿವೆ. ಕೆ.ಎಂ.ನಾಗರಾಜ್ ನೇತೃತ್ವದಲ್ಲಿ ನೆಲದ ಮೂಲ ಸಂಸ್ಕೃತಿ, ಧಾರ್ಮಿಕ ಪರಂಪರೆ ಉಳಿಸುವ ಕಾರ್ಯ ಮತ್ತು ದೇವರ ಉತ್ಸವ ಯಶಸ್ವಿಯಾಗಿ ನೆರವೇರುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪಟಾಲಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿದರು. ಪಟಾಲಮ್ಮ ದೇವಿ ರಥೋತ್ಸವದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಎಂ.ಪಟ್ಟಣ, ಶಾಸಕ ಉದಯ ಗರುಡಾಚಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಕೆ.ಚಂದ್ರಶೇಖರ್, ಹೇಮಚಂದ್ರಸಾಗರ್, ಪ್ರೇಮ ಚಂದ್ರ ಸಾಗರ್, ಪಿ.ಆರ್.ರಮೇಶ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ಉಪಸ್ಥಿತರಿದ್ದರು.