ಸಾರಾಂಶ
ಬೆಂಗಳೂರು : ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ಕನ್ನಡ ಕೃತಿಗಳು ಇಂಗ್ಲಿಷ್ ಸೇರಿ ವಿವಿಧ ಭಾಷೆಗೆ ತರ್ಜುಮೆ ಮಾಡಿ ಕನ್ನಡ ಸಾಹಿತ್ಯದ ಕಂಪು ಪಸರಿಸಲು ಸಹಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸೋಮವಾರ ಕಮಲಾ ಹಂಪನಾ ಸಾಹಿತ್ಯ ವೇದಿಕೆ, ಕರ್ನಾಟಕ ಚಿತ್ರಕಲಾ ಪರಿಷತ್‌ನಿಂದ ಚಿತ್ರಕಲಾ ಪರಿಷತ್‌ನಲ್ಲಿ ಹಂ.ಪ.ನಾಗರಾಜಯ್ಯ ವಿರಚಿತ ದೇಸಿಕಾವ್ಯ ‘ಚಾರು ವಸಂತ’ ಪರ್ಷಿಯನ್ ಅನುವಾದಿತ ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.
ಕನ್ನಡ ಉಳಿಸಿ ಬೆಳೆಸುವಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ. ಮಹತ್ವದ ಕೃತಿಗಳನ್ನು ಭಾಷಾಂತರ ಆಗಲು ಎದುರಾಗುತ್ತಿರುವ ತೊಂದರೆ ಬಗ್ಗೆ ಹಿರಿಯ ಸಾಹಿತಿಗಳ ಮೂಲಕ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕನ್ನಡ ವಿಶ್ವ ಭಾಷೆಗಳಿಗೆ ಅನುವಾದಗೊಂಡರೆ ಹೆಚ್ಚಿನ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ನಾನು ಸಾಹಿತಿ ಅಲ್ಲ. ಆದರೆ, ಸಾಹಿತ್ಯ ಮತ್ತು ಸಾಹಿತಿಗಳ ಒಡನಾಟ ಇದೆ. ಕನ್ನಡ ಕಾವಲು ಪಡೆಗೆ ಮೊದಲ ಅಧ್ಯಕ್ಷನಾದ ಬಳಿಕ ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳ ಹೊರತಾಗಿ ಬೇರೆ ಕಡೆ ಇಂಗ್ಲಿಷ್ ಬಳಸುವುದೇ ಇಲ್ಲ. ಹೀಗಾಗಿ ನನಗೆ ಇಂಗ್ಲಿಷ್ ಜ್ಞಾನ ಹೆಚ್ಚಾಗಲಿಲ್ಲ. ಪ್ರತಿನಿತ್ಯ ವ್ಯವಹಾರಕ್ಕೆ ಕನ್ನಡವನ್ನೇ ಬಳಸುತ್ತಿದ್ದೇನೆ ಎಂದರು.
ಜಾತೀಯತೆ ಚಲನಶಕ್ತಿ ಇಲ್ಲದ ವ್ಯವಸ್ಥೆ. ‘ಚಾರು ವಸಂತ’ ಕೃತಿಯಲ್ಲಿ ಮಲ ಹೊರುವ ಪದ್ಧತಿ ಬಗ್ಗೆಯೂ ಇದೆ. ಜಾತಿ ವ್ಯವಸ್ಥೆ ರೂಪಿಸಿದ ಶಾಪ ಅಸ್ಪೃಶ್ಯತೆ. ಇದು ಅಳಿಸಬೇಕು ಎಂಬುದು ಸುಲಭವೂ ಅಲ್ಲ. ಶಿಕ್ಷಣ ಮಾತ್ರವಲ್ಲದೆ, ಸಾಮಾಜಿಕ, ಆರ್ಥಿಕ ಚಲನ ಶಕ್ತಿಯ ಮೂಲಕ ಜಾತೀಯತೆ ನಿವಾರಿಸಬಹುದು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಮೊಘಲರಿಂದಾಗಿ ಭಾರತದ ಉಪ ನಿಷತ್ತು ಪರ್ಷಿಯನ್‌ಗೆ ತರ್ಜುಮೆಗೊಂಡು ಆ ಮೂಲಕ ಇಂಗ್ಲಿಷ್ ಸೇರಿ ಜಗತ್ತಿನ ಇತರ ಭಾಷೆಗೆ ಪಸರಿಸಿತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೊಘಲರ ಇತಿಹಾಸ ಅಳಿಸಿಹಾಕುವ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಈ ಕೃತಿ ಪರ್ಷಿಯನ್ ಭಾಷೆಗೆ ಅನುವಾದ ಆಗುತ್ತಿರುವುದು ಸಾತ್ವಿಕ ಪ್ರತಿಭಟನೆಯಂತೆ ತೋರುತ್ತಿದೆ ಎಂದರು.
ಕೃತಿಕಾರ ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ಯುವ ಪೀಳಿಗೆ ಮೊಬೈಲ್ ಮೂಲಕ ಜಗತ್ತನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುತ್ತಿದೆ. ಅವರಿಗೆ ಕನ್ನಡ ಸಾಹಿತ್ಯವನ್ನು ಡಿಜಿಟಲ್ ಸ್ವರೂಪದಲ್ಲಿ ವಿಡಿಯೋ, ಆಡಿಯೋ ಮೂಲಕ ತಲುಪಿಸಬೇಕು. ಆ ಮೂಲಕ ಯುವಕರು ಕನ್ನಡಕ್ಕೆ ಮರಳಿ ತರುವ ಕೆಲಸ ಆಗಬೇಕು ಎಂದು ಪ್ರತಿಪಾದಿಸಿದರು.
ಜತೆಗೆ ಕನ್ನಡವನ್ನು ಬೇರೆ ಭಾಷೆಗೆ ಕೊಡುವ ಪರಿಪಾಠ ಕಡಿಮೆಯಾಗಿದೆ. ಕೇವಲ ಅನುವಾದಿಸಿಕೊಳ್ಳುವುದು ಮಾತ್ರವಲ್ಲದೆ ಕನ್ನಡವನ್ನು ಕೊಡುವ ಕೆಲಸವೂ ಆಗಬೇಕಿದೆ.
ಸರ್ಕಾರ ಹಳ ಕನ್ನಡವನ್ನು ಶ್ರವ್ಯ ದೃಶ್ಯ ಮಾಧ್ಯಮದ ಮೂಲಕ ಯುವಕರಿಗೆ ತಲುಪಿಸಬೇಕು. ರಾಜ್ಯದಲ್ಲಿ ಕನ್ನಡವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದ್ವಿಭಾಷಾ ನೀತಿಯನ್ನೇ ಅನುಸರಿಸಬೇಕು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ.ಎಲ್.ಮುಕುಂದರಾಜ್ ಮಾತನಾಡಿದರು. ಪರ್ಷಿಯನ್ ಲೇಖಕಡಾ. ಮಾಹೇರ್ ಮನ್ಸೂರ್ ಸೇರಿ ಇತರರಿದ್ದರು.