ಕುಕನೂರು: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ಲಿಗಲ್ ಕಂ ಪ್ರೋಬೆಷನರ್ ಅಧಿಕಾರಿ ಶಿವಲೀಲಾ ವನ್ನೂರು ಹೇಳಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಪಂದನ ಸಂಸ್ಥೆ ಸಂಯುಕ್ತಾಕ್ಷರದಲ್ಲಿ ಮಂಗಳವಾರ ಜರುಗಿದ ಬಾಲ್ಯ ವಿವಾಹ ಮುಕ್ತಿ ರಥ ಮೂಲಕ ಬಾಲ್ಯವಿವಾಹ ನಿಷೇಧ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ, 21 ವರ್ಷ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ಬಾಲ್ಯ ವಿವಾಹ ಮಾಡಿದರೆ ಬಾಲ್ಯವಿವಾಹದಲ್ಲಿ ಭಾಗಿಯಾದ ವರನ ತಂದೆ ತಾಯಿಗಳು ಬಾಲಕಿಯ ತಂದೆ ತಾಯಿಗಳು ಮದುವೆಯಲ್ಲಿ ಭಾಗವಹಿಸಿದವರು, ಪೂಜಾರಿ, ಲಗ್ನ ಪತ್ರಿಕೆ ಹಾಕಿಸಿದವರು, ಪೆಂಡಾಲ್ ಹಾಕಿದವರು ಎಲ್ಲರೂ ಕೂಡ ಶಿಕ್ಷೆಗೆ ಒಳಗಾಗುತ್ತಾರೆ. ಬಾಲ್ಯ ವಿವಾಹ ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಒಂದು ಲಕ್ಷ ದಂಡ ವಿಧಿಸಲಾಗುವುದು. ಹಾಗಾಗಿ ಯಾರು ಬಾಲ್ಯ ವಿವಾಹ ಮಾಡಬಾರದು. ಒಂದು ವೇಳೆ ಬಾಲ್ಯವಿವಾಹ ಮಾಡುವುದು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098/112 ಸಂಖ್ಯೆಗೆ ಕರೆ ಮಾಡುವ ಮೂಲಕ ಸಾರ್ವಜನಿಕರೆಲ್ಲರೂ ಬಾಲ್ಯವಿವಾಹ ತಡೆಗಟ್ಟಲು ಸಹಕರಿ ನೀಡಬೇಕೆಂದು ಮನವಿ ಮಾಡಿದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ರವಿ ಬಡಿಗೇರ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ರ ಕುರಿತು ಮಾತನಾಡಿದರು.
ಆಪ್ತ ಸಮಾಲೋಚಕ ಅಮರಮ್ಮ ಹಿರೇಮಠ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳ ಕುರಿತು ಮಾತನಾಡಿದರು.ಬಸವರಾಜ್ ಗುಳೇದ್ ಮಕ್ಕಳ ಸಹಾಯವಾಣಿ 1098/112 ಕಾರ್ಯ ನಿರ್ವಹಿಸುತ್ತಿರುವುದರ ಕುರಿತು ಮಾತನಾಡಿದರು.
ಮೇಲ್ವಿಚಾರಕಿಯರಾದ ಲಲಿತಾ ನಾಯಕ್, ಮಾಧವಿ ವೈದ್ಯ, ಪದ್ಮ, ಪ್ರೇಮಲತಾ, ರಾಜೇಶ್ವರಿ, ಮಂಜುಳಾ, ಸ್ಪಂದನ ಸಂಸ್ಥೆಯ ಶಂಕರ ಇತರರಿದ್ದರು.