ಕಾರ್ಕಳ: ಇರಾನ್ ಅಮೆರಿಕಾ ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಾದ ಬಹರೈನ್, ಕತಾರ್ ಮತ್ತು ದುಬೈನಲ್ಲಿ ಉದ್ಯೋಗದಲ್ಲಿರುವ ಕಾರ್ಕಳದ ಹಲವರು ಆತಂಕದಲ್ಲಿದ್ದಾರೆ. ನಿರಂತರ ಮಿಸೈಲ್ ದಾಳಿಗಳ ಸುದ್ದಿ ಮತ್ತು ಆಕಾಶದಲ್ಲಿ ಕೇಳಿಬರುವ ಸದ್ದುಗಳು ಭಾರತೀಯ ಸಮುದಾಯದಲ್ಲಿ ಚಿಂತೆ ಮೂಡಿಸಿವೆ.
ಕಾರ್ಕಳ ತಾಲೂಕಿನ ಅಜೆಕಾರಿನ ಪ್ರಶಾಂತ್ ಕತಾರ್‌ನಲ್ಲಿ ಎಸಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಮೆರಿಕಾದ ವಾಯುನೆಲೆಯ ಸಮೀಪ ಎರಡೂ ಕಿಮಿ ದೂರ ವಾಸವಾಗಿದ್ದಾರೆ. “ರಾತ್ರಿ ಮೂರು ಗಂಟೆ ವೇಳೆಗೆ ಆಕಾಶದಲ್ಲಿ ಭಾರೀ ಸದ್ದುಗಳು ಕೇಳಿಬಂದವು. ಮಿಸೈಲ್ ದಾಳಿಗಳ ಭೀತಿ ನಮ್ಮಲ್ಲಿ ಇದೆ. ಆದರೂ ಕತಾರ್ ಸರ್ಕಾರ ಸುರಕ್ಷತೆ ನೀಡುತ್ತಿದೆ,” ಹತ್ತಿರವಿರುವ ಅಮೆರಿಕಾದ ವಾಯುನೆಲೆ ಸಂಪೂರ್ಣ ವಾಗಿ ನಜ್ಜುಗುಜ್ಜಾಗಿದೆ ಎಂದು ತಿಳಿಸಿದ್ದಾರೆ.ದುಬೈಗೆ ಖಾಸಗಿ ಪ್ರವಾಸದಲ್ಲಿರುವ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವತ್ ಎಸ್.ಎಲ್. ಅವರು, “ಮಿಸೈಲ್ ಸದ್ದುಗಳು ಕೇಳಿ ಕೆಲಕಾಲ ಗಾಬರಿಯಾಯಿತು. ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬ ಮಾಹಿತಿ ಲಭಿಸಿದೆ. ವಿಮಾನ ಸಂಚಾರ ಆರಂಭವಾದ ತಕ್ಷಣ ಊರಿಗೆ ಮರಳುವ ವಿಶ್ವಾಸವಿದೆ,” ಎಂದಿದ್ದಾರೆ.ಬಹರೈನ್‌ನಲ್ಲಿ ಉದ್ಯೋಗದಲ್ಲಿರುವ ತೆಳ್ಳಾರಿನ ಶಾಶ್ವತ್ ಪೂಜಾರಿ, “ಬಹರೈನ್ ಸರ್ಕಾರ ನಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆಯಿಂದಿದೆ. ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೂ ನಾವು ಅಲರ್ಟ್ ಆಗಿರುವುದು ಉತ್ತಮ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ದುಬೈನಲ್ಲಿ ಇರುವ ಮಾಳದ ಹರ್ಷೇಂದ್ರ ಶೆಟ್ಟಿ ಮಾತನಾಡಿ, “ಮಿಸೈಲ್ ಸದ್ದುಗಳು ಭಯ ಹುಟ್ಟಿಸುತ್ತಿವೆ. ಆದರೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ,” ಎಂದಿದ್ದಾರೆ.ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಪ್ರಮಿಳಾ ಪ್ರಭು ಅವರು, “ಇರಾನ್‌ನಿಂದ ಬರುವ ಮಿಸೈಲ್‌ಗಳನ್ನು ಐರನ್ ಡೋಮ್ ವ್ಯವಸ್ಥೆ ಹೆಚ್ಚಿನ ಪ್ರಮಾಣದಲ್ಲಿ ನಿಷ್ಕ್ರಿಯಗೊಳಿಸುತ್ತಿದೆ. ಸೈರನ್ ಮೊಳಗಿದಾಗ ತಕ್ಷಣ ಬಂಕರ್‌ಗಳಲ್ಲಿ ಆಶ್ರಯ ಪಡೆಯುವಂತೆ ಸರ್ಕಾರ ಸೂಚಿಸುತ್ತದೆ. ಆದ್ದರಿಂದ ಆತಂಕ ಇದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ,” ಎಂದು ತಿಳಿಸಿದ್ದಾರೆ.ಒಟ್ಟಾರೆ, ಯುದ್ಧಭೀತಿ ನಡುವೆ ಗಲ್ಫ್ ಹಾಗೂ ಇಸ್ರೇಲ್ ರಾಷ್ಟ್ರಗಳಲ್ಲಿ ಇರುವ ಕಾರ್ಕಳದ ನಿವಾಸಿಗಳು ಎಚ್ಚರಿಕೆಯಿಂದ ದಿನನಿತ್ಯದ ಬದುಕು ಸಾಗಿಸುತ್ತಿದ್ದಾರೆ.
