ಛಲವಾದಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಅಗತ್ಯ: ಪೋಷಕರಿಗೆ ಶಾಸಕ ಶ್ರೀನಿವಾಸ್ ಸಲಹೆ

| Published : Apr 20 2025, 01:49 AM IST

ಛಲವಾದಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಅಗತ್ಯ: ಪೋಷಕರಿಗೆ ಶಾಸಕ ಶ್ರೀನಿವಾಸ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು. ಗ್ರಾಮಗಳಲ್ಲಿ ಛಲವಾದಿ ಸಮುದಾಯ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದಾಯಕ.

ಕನ್ನಡಪ್ರಭ ವಾರ್ತೆ ಗುಬ್ಬಿ

ಛಲವಾದಿ ಸಮುದಾಯ ಭವನದ ಬದಲು ಗುಬ್ಬಿ ಪಟ್ಟಣದಲ್ಲಿ ವಿದ್ಯಾರ್ಥಿ ನಿಲಯ ಮಾಡಿಕೊಂಡರೆ ತಮ್ಮ ಮಕ್ಕಳು ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಚೌಕೋನಹಳ್ಳಿ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಹಾಗೂ ನೂತನ ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲಿ ಮೇಲು- ಕೀಳು ಎಂಬ ಭೇದ ಹೋಗಲಾಡಿಸಲು ಹೋರಾಟ ಮಾಡಿದ್ದರು. ಅಂತಹ ಮಹಾನ್ ವ್ಯಕ್ತಿ ಹಾಕಿಕೊಟ್ಟ ಧರ್ಮದ ದಾರಿಯಲ್ಲಿ ನಾವು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಸಂಘಟಿತರಾಗಿ ಗ್ರಾಮಗಳ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ಶ್ರಮಪಡಬೇಕು ಎಂದರು.

ಗುಬ್ಬಿ ಪಟ್ಟಣದಲ್ಲಿ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನವನ್ನು ನಿರ್ಮಿಸಿದ್ದು, ಅದರಲ್ಲಿ ಸಮುದಾಯದ ಜನರು ಮದುವೆ, ಶುಭ ಸಮಾರಂಭಗಳನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದೇ ರೀತಿ ಕೆಲವು ಕಾಲೋನಿಗಳಲ್ಲೂ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದ್ದು, ಅಲ್ಲಿ ಸಭೆ- ಸಮಾರಂಭಗಳನ್ನು ಮಾಡಲು ಅವಕಾಶ ಮಾಡಲಾಗಿದೆ. ಈ ಛಲವಾದಿ ಸಮುದಾಯದ ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಡಾ. ಅಂಬೇಡ್ಕರ್ ರವರ ಜನ್ಮದಿನಾಚರಣೆ ಆಚರಿಸುವುದು ಸಾರ್ಥಕವಾಗುತ್ತದೆ ಎಂದರು.

ಚಿತ್ರದುರ್ಗ ಶ್ರೀ ಜಗದ್ಗುರು ಛಲವಾದಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಬಸವ ನಾಗಿದೇವ ಶರಣರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲಾ ರೀತಿಯ ಹೋರಾಟವನ್ನು ಎಲ್ಲರೂ ಮಾಡಿಕೊಂಡು ಬಂದಿದ್ದಾರೆ. ಛಲವಾದಿ ಸಮುದಾಯವನ್ನು ಉದ್ಯಮಿ ಸಮುದಾಯವಾಗಿ ಅಭಿವೃದ್ಧಿ ಮಾಡುತ್ತೇವೆ. ಈ ನಿಟ್ಟಿನಲ್ಲಿ ಹೊಸ ಸಾಫ್ಟ್ ವೇರ್ ಬಿಡುಗಡೆ ಮಾಡಿದ್ದು, ಅದನ್ನು ಸಮುದಾಯದ ಯುವಕರು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಕೆ.ಶಿವರಾಂ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು. ಗ್ರಾಮಗಳಲ್ಲಿ ಛಲವಾದಿ ಸಮುದಾಯ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದಾಯಕ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ಈರಣ್ಣ, ಛಲವಾದಿ ಮಹಾಸಭಾ ಜಂಟಿ ಕಾರ್ಯದರ್ಶಿ ಟಿ.ಆರ್ .ನಾಗೇಶ್, ರಾಜ್ಯ ಛಲವಾದಿ ಮಹಾಸಭಾ ಖಜಾಂಚಿ ಮೈಕೋ ನಾಗರಾಜು, ಛಲವಾದಿ ಮಹಾಸಭಾ ಗೌರವಾಧ್ಯಕ್ಷ ಬಿ.ಲೋಕೇಶ, ಛಲವಾದಿ ಮಹಾಸಭಾ ಯುವ ಘಟಕದ ಅಧ್ಯಕ್ಷ ಎಚ್. ಕೆ. ಮಧು, ಗ್ರಾಪಂ ಸದಸ್ಯ ಬೋರಯ್ಯ, ಸಿ.ಎಲ್. ಚಂದ್ರಶೇಖರ್, ಮುಖಂಡರಾದ ಬಿ.ಡಿ. ನರಸಿಂಹಮೂರ್ತಿ, ಛಲವಾದಿ ಮಹಸಭಾದ ಮಹಳಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ರಾಮಣ್ಣ, ಹರೀಶ್, ಛಲವಾದಿ ಮಹಾಸಭಾದ ತಾಲೂಕು ಯುವ ಘಟಕದ ಗೌರವಾಧ್ಯಕ್ಷ ಎ. ಮಂಜುನಾಥ್, ಮಂಜುಳಾ ವೆಂಕಟೇಶ್, ರವೀಶ್, ಎನ್. ಮಂಜುನಾಥ್, ಸಚಿನ್, ಗಿರೀಶ್, ಎ.ಟಿ ಮುನಿರಾಜು, ಆನಂದ್, ಲೋಕೇಶ್, ಛಲವಾದಿ ಮಹಾಸಭಾದ ಕಸಬಾ ಹೋಬಳಿ ಘಟಕದ ಪದಾಧಿಕಾರಿಗಳು, ಚೌಕೇನಹಳ್ಳಿ ಗ್ರಾಮ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.