ಸಾರಾಂಶ
ವರ್ಷಕ್ಕೊಮ್ಮೆ ನಡೆಯುವ ಈ ರಂಗ ಹಬ್ಬಎಲ್ಲರ ಮನಸ್ಸಿಗೆ ಮುದ ನೀಡಲಿದೆ. ರಂಗಕುಣಿತ ಸರ್ವೆ ಸಾಮಾನ್ಯವಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ಜಾನಪದದ ಕಲೆಯಾಗಿದೆ. ಸುಗ್ಗಿಯ ಹಿಗ್ಗಿನ ಸಂಭ್ರಮ ಮನೆ ಮಾಡಲು ರಂಗನ ಕುಣಿತವನ್ನು ನಮ್ಮ ಹಿರಿಯರು ರಂಗದ ಹಬ್ಬದಂದು ಆಚರಿಸುತ್ತಾ ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಜಾನಪದ ಕಲೆ ಉಳಿಯಲು ಗ್ರಾಮೀಣ ಜನರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಊಗಿನಹಳ್ಳಿಯಲ್ಲಿ ರಂಗದ ಹಬ್ಬದಲ್ಲಿ ಮಾತನಾಡಿದ ಶಾಸಕರು, ರಂಗಕುಣಿತದ ಸಂಭ್ರಮ ಮರೆಯಲಾಗದು. ಹಳ್ಳಿಯ ಸೊಗಡಿನ ಕುಣಿತಕ್ಕೆ ತಲೆದೂಗದ ಜನರಿಲ್ಲ ಎಂದರು.
ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬಎಲ್ಲರ ಮನಸ್ಸಿಗೆ ಮುದ ನೀಡಲಿದೆ. ರಂಗಕುಣಿತ ಸರ್ವೆ ಸಾಮಾನ್ಯವಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ಜಾನಪದದ ಕಲೆಯಾಗಿದೆ. ಸುಗ್ಗಿಯ ಹಿಗ್ಗಿನ ಸಂಭ್ರಮ ಮನೆ ಮಾಡಲು ರಂಗನ ಕುಣಿತವನ್ನು ನಮ್ಮ ಹಿರಿಯರು ರಂಗದ ಹಬ್ಬದಂದು ಆಚರಿಸುತ್ತಾ ಬಂದಿದ್ದಾರೆ ಎಂದರು.ತಮಟೆ ನಾದಕ್ಕೆ ಗೆಜ್ಜೆಕಟ್ಟಿ ಕುಣಿಯುವ ಕುಣಿತ ರೋಮಾಂಚನವಾಗಲಿದೆ. ಯುವಕರಲ್ಲಿ ರಂಗಕುಣಿತಕ್ಕೆ ತರಬೇತಿ ನೀಡಲು ಹಿರಿಯರು ಮುಂದಾಗಬೇಕು. ಕಲೆ ಬಗ್ಗೆ ಯುವಕರಲ್ಲಿ ಅಭಿರುಚಿ ಮೂಡಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ದೇಶಿಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬದುಕಿಗೆ ಮೈಗೂಢಿಸಿಕೊಳ್ಳಬೇಕಿದೆ ಎಂದರು.
ಗ್ರಾಮಸ್ಥರು ಹಬ್ಬಕ್ಕೂ ಮುನ್ನಗ್ರಾಮದ ಹೊರವಲಯದ ಈಶ್ವರ ದೇವಾಲಯಕ್ಕೆ ತೆರಳಿ ಶಿವನಿಗೆ ಅಭಿಷೇಕ, ಅರ್ಚನೆ ಸಲ್ಲಿಸಿ ಪೂಜೆ ಸಲ್ಲಿಸಿದರು. ದೇಗುಲದಿಂದ ಕಳಸವನ್ನು ಪೂಜಿಸಿ ಮೆರವಣಿಗೆಯೊಂದಿಗೆ ರಂಗಸ್ಥಳಕ್ಕೆ ತರಲಾಯಿತು.ರಂಗದಕುರ್ಜುವಿಗೆ ಕಳಸವನ್ನು ಪ್ರತಿಷ್ಟಾಪಿಸಿ ರಂಗಮಂಟಪವನ್ನು ಪೂಜಿಸಿದರು. ರಂಗಮಂಟಪ ತಳಿರು ತೋರಣ, ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು.
ಗ್ರಾಮದ ಯುವಕರು, ಪುಟಾಣಿಗಳು ಹಿರಿಯ ಮಾರ್ಗದರ್ಶನದಂತೆ ಗೆಜ್ಜೆ ಕಟ್ಟಿಕೊಂಡು ಕುಣಿತಕ್ಕೆ ಹೆಜ್ಜೆ ಹಾಕಿದರು. ಟವಲ್ ಬೀಸುತ್ತಾ ರಂಗ ಕುಣಿತಕ್ಕೆ ಮೆರಗು ನೀಡಿದರು. ವಿವಿಧ ಮಟ್ಟುಗಳ ಹೆಜ್ಜೆ ಹಾಕಿ ಸೈಯಲೋ ಸೈ ಎಂದು ಕುಣಿದು ಸಂಭ್ರಮಿಸಿದರು. ಶಾಸಕ ಎಚ್.ಟಿ.ಮಂಜು ರಂಗ ಕುಣಿತಕ್ಕೆ ಹೆಜ್ಜೆ ಹಾಕಿ ಗ್ರಾಮೀಣ ಹಬ್ಬಕ್ಕೆ ಸಾಥ್ ನೀಡಿದರು.ಈ ವೇಳೆ ಮುಖಂಡರಾದರಾಜು, ಮುರುಳೀಧರ್, ರೂಪೇಶ್, ಸ್ವಾಮಿ, ಪರಮೇಶ್, ಪುಟ್ಟಸ್ವಾಮಿ, ಮತ್ತಿತರರಿದ್ದರು.