ಸಾರಾಂಶ
ಮಕ್ಕಳ ದಿನಾಚರಣೆ: ಕನ್ನಡಪ್ರಭ ಆಯೋಜನೆಯ ಪುತ್ತೂರು ತಾಲೂಕು ಚಿತ್ರಕಲಾ ಸ್ಪರ್ಧೆ
ಪುತ್ತೂರು: ಮನುಷ್ಯರನ್ನು ಪ್ರೀತಿಸುವಂತೆ ವನ್ಯ ಜೀವಿಗಳನ್ನೂ ಪ್ರೀತಿಸುವ ಗುಣ ನಮ್ಮಲ್ಲಿ ಬೆಳೆದು ಬರಬೇಕು. ಮರ, ಗಿಡಗಳನ್ನು ಉಳಿಸಿ ಬೆಳೆಸುವುದರಿಂದ ಸಮೃದ್ಧ ಮತ್ತು ಸ್ವಚ್ಛ ಬದುಕು ನಮ್ಮದಾಗಲಿದೆ. ಪ್ರಾಣಿಗಳು ಮತ್ತು ಅರಣ್ಯವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮನುಷ್ಯರಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದು ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ರೈ ಹೇಳಿದರು. ಕನ್ನಡಪ್ರಭ ದಿನಪತ್ರಿಕೆ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗ, ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಪುತ್ತೂರಿನ ಅಮರ್ ಅಕ್ಬರ್ ಅಂತೋನಿ ಫ್ರಂಡ್ಸ್ ಕ್ಲಬ್‌ನ ಸಹಕಾರದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಅವರು, ಅರಣ್ಯ ನಾಶದಿಂದಾಗಿ ಆನೆ ಸೇರಿದಂತೆ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದೆ. ಆನೆಯ ಕಾರಿಡಾರ್‌ಗಳಿಗೆ ಸಂಚಕಾರ ಬಂದಾಗ ಅದು ಊರಿಗೆ ಬರುತ್ತಿದೆ. ಪ್ರಕೃತಿಯ ಅಸಮತೋಲನಕ್ಕೆ ಕಾಡು ನಾಶವಾಶವಾಗಿರುವುದು ಕಾರಣವಾಗಿದೆ. ಪ್ರಕೃತಿಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಅಗತ್ಯ ಎಂದರು. ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಆಡಳಿತ ಮಂಡಳಿ ಕೋಶಾಧಿಕಾರಿ ಅಶೋಕ್ ಕುಂಬ್ಳೆ ಮಾತನಾಡಿ, ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದಕ್ಕಿಂತಲೂ ಭಾಗವಹಿಸುವುದು ಬಹಳ ಮುಖ್ಯ. ಒಮ್ಮೆ ಬಿಡಿಸಿದ ಚಿತ್ರವು ಜೀವನ ಪರ್ಯಂತ ಉಳಿಯಲಿದೆ. ಕನ್ನಡಪ್ರಭ ಪತ್ರಿಕಾ ಬಳಗವು ವಿದ್ಯಾರ್ಥಿಗಳಿಗೆ ಪೃಕೃತಿ ಪರವಾದ ಚಿತ್ರಗಳನ್ನು ಬಿಡಿಸುವ ಸ್ಪರ್ಧೆ ನಡೆಸುವ ಮೂಲಕ ಅವರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿರುವುದು ಅಭಿನಂದನಾರ್ಹ. ಮಕ್ಕಳ ಕೌಶಲ್ಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಪರಿಸರ ಪರವಾದ ಪ್ರೀತಿ ಮೂಡಿ ಬರಬೇಕು. ಮಕ್ಕಳಲ್ಲಿ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ. ಚಿತ್ರಕಲೆಗೆ ಅಪಾರವಾದ ಶಕ್ತಿ ಇದೆ. ಈ ಶಕ್ತಿಯ ಅನಾವರಣಗೊಳಿಸುವಲ್ಲಿ ‘ಕನ್ನಡಪ್ರಭ’ ಪತ್ರಿಕಾ ತಂಡ ಪ್ರೇರಣೆ ನೀಡುವ ಕೆಲಸ ಮಾಡಿದೆ ಎಂದರು. ತೀರ್ಪುಗಾರರಾಗಿ ಆಗಮಿಸಿದ ಹಿರಿಯ ಕಲಾವಿದ ಶಿವಗಿರಿ ಕಲ್ಲಡ್ಕ ಮಾತನಾಡಿ, ಚಿತ್ರವನ್ನು ಬಿಡಿಸುತ್ತಾ ಬಿಡಿಸುತ್ತಾ ಈ ಕಲೆಯು ಬೆಳೆಯುತ್ತಾ ಹೋಗುತ್ತದೆ. ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿದೆ. ಎಲ್ಲಾ ವಿದ್ಯಾರ್ಥಿಗಳಿಂದಲೂ ಉತ್ತಮ ಚಿತ್ರಗಳು ಮೂಡಿ ಬಂದಿದ್ದು, ಇನ್ನಷ್ಟು ಬೆಳವಣಿಗೆ ಕಾರಣವಾಗಲಿ ಎಂದರು.ವೇದಿಕೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮದನ್ ಉಪಸ್ಥಿತರಿದ್ದರು. ಕನ್ನಡಪ್ರಭದ ಹಿರಿಯ ಪ್ರದಾನ ವರದಿಗಾರ ಆತ್ಮಭೂಷಣ್ ಅಟ್ಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ ಸುದ್ದಿ ಸಂಪಾದಕ ಕೃಷ್ಣಮೋಹನ್ ತಲೆಂಗಳ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ತಾಲೂಕು ವರದಿಗಾರ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕನ್ನಡಪ್ರಭ ಮಾರುಕಟ್ಟೆ ವ್ಯವಸ್ಥಾಪಕ ನಾಗರಾಜ್ ಸಂಯೋಜಿಸಿದರು. ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಶಿಕ್ಷಕರಾದ ರುಕ್ಮಯ್ಯ ಮತ್ತು ಸುಂದರ್ ಸಹಕರಿಸಿದರು.ಚಿತ್ರಸ್ಪರ್ಧೆ ಫಲಿತಾಂಶ: 4,5ನೇ ತರಗತಿ ವಿಭಾಗದಲ್ಲಿ: 4ನೇ ತರಗತಿಯ ವರಾಲಿ ಪ್ರಥಮ, 5ನೇ ತರಗತಿಯ ಶ್ರವಣ್ ಎಲ್.ಟಿ. ದ್ವಿತೀಯ, 5ನೇ ತರಗತಿಯ ಹೃದ್ಯಾ ತೃತೀಯ, 4ನೇ ತರಗತಿಯ ಕೀರ್ತನ್ ಪಿಯು ಹಾಗೂ 4ನೇ ತರಗತಿಯ ಗೌತಮ್ ಎಚ್. ಪ್ರೋತ್ಸಾಹಕ ಬಹುಮಾನ ಗಳಿಸಿದ್ದಾರೆ.
6,7ನೇ ತರಗತಿ ವಿಭಾಗದಲ್ಲಿ: 6ನೇ ತರಗತಿಯ ಪ್ರಜ್ವಲ್ ಕೃಷ್ಣ ಎಂ.ವಿ.ಪ್ರಥಮ, 7ನೇ ತರಗತಿಯ ಸಾನ್ವಿ ಬಿ.ಎಸ್.ದ್ವಿತೀಯ, ಆತ್ಮೀಕಾ ಆರ್. ತೃತೀಯ, ಮೇಘನಾ ವಿ. ಹಾಗೂ ಯಾಜ್ವೈ ಪಿ. ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ.8,9,10ನೇ ತರಗತಿ ವಿಭಾಗದಲ್ಲಿ 10ನೇ ತರಗತಿಯ ನಿಲಿಶ್ಕಾ ಕೆ. ಪ್ರಥಮ, 9ನೇ ತರಗತಿಯ ಚಿಂತನಾ ಎಂ. ದ್ವಿತೀಯ, 9ನೇ ತರಗತಿಯ ವಿಘ್ನೇಶ್ ವಿಶ್ವಕರ್ಮ ತೃತೀಯ, 9ನೇ ತರಗತಿಯ ಅವನಿ ಎಸ್.ವಿ. ಹಾಗೂ ಎಸ್.ಜೆ.ದ್ವಿಜನ್ ಪ್ರೋತ್ಸಾಹಕರ ಬಹುಮಾನ ಗಳಿಸಿದರು.
;Resize=(128,128))
;Resize=(128,128))
;Resize=(128,128))