ಕಾಂಗ್ರೆಸ್ ಸರ್ಕಾರ ಆಡಳಿತ ವಿಫಲ ಆರೋಪಿಸಿ ಬಿಜೆಪಿ ಪ್ರತಿಭಟನೆ

| Published : Nov 18 2025, 02:00 AM IST

ಕಾಂಗ್ರೆಸ್ ಸರ್ಕಾರ ಆಡಳಿತ ವಿಫಲ ಆರೋಪಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಮಂಡಲ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಮಂಡಲ ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ, ಕಾಂಗ್ರೆಸ್‌ ಮುಖಂಡ ಹರಪಳ್ಳಿ ರವೀಂದ್ರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ವಿವೇಕಾನಂದ ಸರ್ಕಲ್ ನಿಂದ ಪಕ್ಷದ ಕಾರ್ಯಕರ್ತರು ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಜೇಸಿ ವೇದಿಕೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಇನ್ನು ಹಲವು ಮಂದಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಸಾಮಾನ್ಯ ಜನರಿಗೆ ಹೆಚ್ಚಿನ ತೆರಿಗೆ: ಅಶ್ವಥ್ ನಾರಾಯಣಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮಾತನಾಡಿ, ಬಿಜೆಪಿ ಮೇಲಿನ ಅಪಪ್ರಚಾರ ಮತ್ತು ಸುಳ್ಳು ಭರವಸೆಗಳಿಂದ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. ಗ್ಯಾರೆಂಟಿಗೆ ಕೊಡುವ ಅನುದಾನಕ್ಕಿಂತ ಹೆಚ್ಚಿನ ತೆರಿಗೆಯನ್ನು ಸಾಮಾನ್ಯ ಜನರಿಗೆ ವಿಧಿಸಿದೆ. ರಾಜ್ಯವನ್ನು ಆಳುತ್ತಿರುವ ಬಹುತೇಕ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ದೇಶ ರಕ್ಷಣೆಯಲ್ಲಿ ಕೊಡಗಿನ ಸೈನಿಕರ ಕೊಡುಗೆ ಅಪಾರವಾಗಿದೆ. ಬಿಜೆಪಿ ರಾಜ್ಯ ಆಡಳಿತ ಚುಕ್ಕಾಣಿ ಹಿಡಿದ ನಂತರ ಕೊಡಗಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳನ್ನೆಲ್ಲ ಮರೆತಿದೆ. ಖಾಲಿ ಘೋಷಣೆ, ಇಂದು ರಾಜ್ಯದಲ್ಲಿ ಉದ್ಯೋಗಾವಕಾಶಗಳು ನಿಂತಿವೆ, ಅಭಿವೃದ್ಧಿ ಯೋಜನೆಗಳು ನಿಧಾನಗೊಂಡಿವೆ. ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ: ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ರೈತರ, ಕಾಫಿ ಬೆಳೆಗಾರ ಸಮಸ್ಯೆಗಳು, ರಸ್ತೆಗಳ ದುಸ್ಥಿತಿ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊಡಗಿನ ರಸ್ತೆಗಳನ್ನು ಗುಂಡಿ ಮುಚ್ಚಲು ಸಾಧ್ಯವಾಗದ ಇಂದಿನ ಜನಪ್ರತಿನಿಧಿಗಳು ಕೋಟಿ ಲೆಕ್ಕದಲ್ಲಿ ಜಿಲ್ಲೆ ತಾಲೂಕನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ನನ್ನ ಅವಧಿಯಲ್ಲಿ 94 ಸಿ, 94 ಸಿಸಿ ಸೇರಿದಂತೆ 13 ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿದೆ. ಸಿ ಆ್ಯಂಡ್ ಡಿ ಭೂಮಿಗೂ ಅನೇಕರಿಗೆ ಹಕ್ಕುಪತ್ರ ನೀಡಿದ್ದೇವೆ. ಆ ಜಾಗದ ದುರಸ್ತಿಯೂ ಆಗಿದೆ. ಕಾಂಗ್ರೆಸ್‌ನವರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ರೈತವಿರೋಧಿ ಸರ್ಕಾರ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ದೂಷಿಸಿದರು.ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಮಂಡಳ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ತಾಲೂಕು ಅಧ್ಯಕ್ಷ ಕವಿತಾ ವಿರೂಪಾಕ್ಷ, ಕೃಷಿ ಮೋರ್ಚಾ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ರವಿ ಮೊಗೆರಾ, ತಾಲೂಕು ಅಧ್ಯಕ್ಷ ರಾಮಕೃಷ್ಣ ಮುಖಂಡರಾದ ಬಿ.ಬಿ. ಭಾರತೀಶ್, ಸುನಿಲ್, ಮಹೇಶ್ ಜೈನಿ, ವಿ.ಕೆ.ಲೋಕೇಶ್, ಮನುಕುಮಾರ್ ರೈ ಇದ್ದರು.

ಕಳೆದ 25 ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರು ಕೊಡಗನ್ನು ಅಭಿವೃದ್ಧಿ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಆರೋಪ ಮಾಡುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಜನರು ಹೆಲಿಕಾಪ್ಟರ್‌ನಲ್ಲಿ ತಿರುಗಾಡುತ್ತಿದ್ದಾರೆಯೇ. ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ರಸ್ತೆ ಮಾಡಿಕೊಂಡಿರುವುದು ಕಾಂಗ್ರೆಸ್ ಶಾಸಕರ ಸಾಧನೆ. ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜು, ವಿಶ್ವವಿದ್ಯಾಲಯ ಎಲ್ಲವನ್ನೂ ಬಿಜೆಪಿ ಆಡಳಿತವಿದ್ದಾಗ ಮಾಡಿದೆ. ಮಡಿಕೇರಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಎಂದು ಸುಳ್ಳು ಹೇಳಲಾಗುತ್ತಿದೆ. -ಕೆ.ಜಿ.ಬೋಪಯ್ಯ, ಮಾಜಿ ಸ್ಪೀಕರ್.

ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಿದ್ದೇನೆ. ನನ್ನ ಕುಟುಂಬ ಜೆಡಿಎಸ್ ನಲ್ಲಿ ಗುರತಿಸಿಕೊಂಡಿತ್ತು. ಕಳೆದ ವರ್ಷ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೆ. ಆದರೆ ಸಮಾಜ ಸೇವಕರಿಗೆ ಕಾಂಗ್ರೆಸ್‌ನಲ್ಲಿ ಗೌರವವಿಲ್ಲ ಎಂದು ಅರಿವಾದ ನಂತರ ಬಿಜೆಪಿ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಅಭಿಮಾನಿಗಳ ಸಂಘದ ಸದಸ್ಯರು ಸೇರಿದಂತೆ ಸಾವಿರಾರು ಮಂದಿಯನ್ನು ಬಿಜೆಪಿಗೆ ಸೇರ್ಪಡೆ ಮಾಡುತ್ತೇನೆ. -ಹರಪಳ್ಳಿ ರವೀಂದ್ರ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ