ಫ್ಲೆಕ್ಸ್ ತೆರವುಗೊಳಿಸಲು ಬಿಜೆಪಿ ಪದಾಧಿಕಾರಿಗಳ ಆಗ್ರಹ

| Published : Nov 18 2025, 02:00 AM IST

ಸಾರಾಂಶ

ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ತಾಲೂಕಿನ ಹಲವೆಡೆ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ಪಂಚಾಯಿತಿ ಆಡಳಿತ ಕೂಡಲೆ ತೆರವುಗೊಳಿಸಬೇಕು ಎಂದು ಮಂಡಲ ಬಿಜೆಪಿ ಪದಾಧಿಕಾರಿಗಳು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸ್ಥಳೀಯ ಆಡಳಿತದ ಅನುಮತಿ ಪಡೆಯದೆ ತಾಲೂಕಿನ ಹಲವೆಡೆ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ಪಂಚಾಯಿತಿ ಆಡಳಿತ ಕೂಡಲೆ ತೆರವುಗೊಳಿಸಬೇಕು ಎಂದು ಮಂಡಲ ಬಿಜೆಪಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಜನಪ್ರತಿನಿಧಿಗಳು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗಬೇಕು. ಫ್ಲೆಕ್ಸ್‌ಗಳ ಹಾಕಿ ಪ್ರಚಾರ ಮಾಡಿದರೆ ಜನರಿಗೆ ಹತ್ತಿರವಾಗಲು ಸಾಧ್ಯವಿಲ್ಲದ ಮಾತು ಎಂದು ಮಂಡಲ ಅಧ್ಯಕ್ಷ ಗೌತಮ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕೊಡಗಿನ ಗಲ್ಲಿಗಲ್ಲಿಗಳಲ್ಲಿ ಫ್ಲೆಕ್ಸ್ಗಳನ್ನು ಹಾಕಿ ಪ್ರಚಾರ ಪಡೆಯುವ ಪದ್ಧತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. ಒಂದೆರಡು ದಿನ ಫ್ಲೆಕ್ಸ್ ಹಾಕಿ ನಂತರ ತೆರವುಗೊಳಿಸಿದರೆ ಸಮಸ್ಯೆಯಿಲ್ಲ. ಆದರೆ ತಿಂಗಳುಗಟ್ಟಲೆ ಅಲ್ಲೇ ಬಿಡುವುದು ತಪ್ಪು. ಇನ್ನಾದರೂ ಸ್ಥಳೀಯ ಆಡಳಿತ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಹೇಳಿದರು.ತಾಲೂಕು ಕಚೇರಿಯನ್ನು ಶುದ್ಧ ಮಾಡುತ್ತೇನೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ತರುತ್ತೇನೆ ಎಂದು ಹಾಲಿ ಶಾಸಕರು ಹೇಳಿ ಎರಡೂವರೆ ವರ್ಷಗಳೇ ಕಳೆದಿವೆ. ಹಿಂದಿನ ಶಾಸಕರು ಅವಧಿಯಲ್ಲಿ 13 ವೈದ್ಯರು ಕೆಲಸ ಮಾಡುತ್ತಿದ್ದರು. ಈಗ ಮೂವರು ಇದ್ದಾರೆ. ಇದರಿಂದ ರೋಗಿಗಳು ದೂರದೂರಿನ ಆಸ್ಪತ್ರೆಗಳನ್ನು ಆಶ್ರಯಿಸಬೇಕಿದೆ. ಯಾವುದೂ ಸುಧಾರಣೆ ಕಂಡಿಲ್ಲ ಎಂದು ಹೇಳಿದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಎರಡು ವರ್ಷದಿಂದ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೆ, ಅಭಿವೃದ್ಧಿ ಕುಂಠಿತವಾಗಿದೆ. ಪಂಚಾಯಿತಿಗೆ ಸಿಕ್ಕ ಅನುದಾನಗಳನ್ನು ಶಾಸಕರು ತಮ್ಮ ಅನುದಾನವೆಂದು ಭೂಮಿ ಪೂಜೆ ಮಾಡುತ್ತಿದ್ದಾರೆ. ಗ್ರಾಮಸಭೆಗಳನ್ನು ನಡೆಸಿ, ಕಾಮಗಾರಿ ಪಟ್ಟಿ ತಯಾರಿಸಬೇಕಿದೆ. ಆದರೆ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿದರು. ಅಭಿವೃದ್ಧಿ ಶೂನ್ಯವಾಗಿದೆ. ರಸ್ತೆ ಬದಿಯ ಕಾಡುಗಳನ್ನು ಕಡಿಯಲು ಇವರಿಂದ ಆಗಿಲ್ಲ ಎಂದು ದೂರಿದರು.ಮಂಡಳ ಕಾರ್ಯದರ್ಶಿ ದರ್ಶನ್ ತಿಮ್ಮಯ್ಯ ಮಾತನಾಡಿ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡೆಗಳಾಗಿವೆ. ಬೇರೆ ಪಕ್ಷದ ಕಾರ್ಯಕರ್ತರಿಗೆ ಯಾವುದೆ ಗುತ್ತಿಗೆ ಕೆಲಸಗಳನ್ನು ನೀಡುತ್ತಿಲ್ಲ ಎಂದು ದೂರಿದರು.ಗೋಷ್ಠಿಯಲ್ಲಿ ಮಂಡಳ ಕಾರ್ಯದರ್ಶಿ ಎಸ್.ಆರ್.ಸೋಮೇಶ್, ಮಂಡಳ ಮಹಿಳಾ ಘಟಕದ ಕಾರ್ಯದರ್ಶಿ ಇಂದಿರಾ ಮೋಣಪ್ಪ ಇದ್ದರು.