ಮಡಿಕೇರಿ: ಮಕ್ಕಳ ಪ್ರತಿಭೆ ಪ್ರೋತ್ಸಾಹ ಪುರಸ್ಕಾರಗಳು ಪೂರಕವಾಗಿವೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಪುರಸ್ಕಾರ ಸಹಕಾರಿಯಾಗಿದ್ದು, ಇದರಿಂದ ಮತ್ತಷ್ಟು ಮಕ್ಕಳು ಪ್ರೇರೇಪಿತರಾಗಿ ಅವರೂ ಉತ್ತಮ ಸಾಧನೆ ಮಾಡಿ ಪುರಸ್ಕಾರಕ್ಕೆ ಭಾಜನರಾಗುತ್ತಾರೆ ಹಿರಿಯ ವಕೀಲ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ವತಿಯಿಂದ ಮಡಿಕೇರಿ‌ ನಗರದ‌ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಸ್ಥಾಪಿಸಿರುವ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ 2024-25 ನೇ ಸಾಲಿನಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ನಿಡ್ತ ಪ್ರೌಢಶಾಲೆಯ ಕು.ಜೆ.ಎಸ್. ಪೂರ್ವಿಕಾ ಎಂಬ ವಿದ್ಯಾರ್ಥಿನಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬಳಗದ ಸಲಹೆಗಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುವ ಪ್ರತಿಭಾವಂತರನ್ನು ಶೈಕ್ಷಣಿಕವಾಗಿ ಸಬಲರಾಗಿ ಮಾಡಿ, ಅವರು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡುವುದೇ ದತ್ತಿ ಪ್ರಶಸ್ತಿಯ ಉದ್ದೇಶವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ತಾವು ಕೂಡ ತಮ್ಮ ತಂದೆ- ತಾಯಿಯ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವುದಾಗಿ ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು, ಬಳಗದ ವತಿಯಿಂದ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಶ್ರಮಿಸಲಾಗುತ್ತಿದೆ‌ ಎಂದರು.ಲೇಖಕರ ಮತ್ತು ಕಲಾವಿದರ ಬಳಗವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವುದು ಹೆಮ್ಮೆ ಎಂದು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್‌ ಹೇಳಿದರು. ಬಳಗದ ಉಪಾಧ್ಯಕ್ಷ ಪುದಿನೆರವನ ರೇವತಿ ರಮೇಶ್, ಎಂ.ಇ.ಮೊಹಿದ್ದೀನ್, ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್, ನಿರ್ದೇಶಕರಾದ ಅಂಬೇಕಲ್ ನವೀನ್, ನೆರವಂಡ ಉಮೇಶ್, ಶ್ವೇತಾ ರವೀಂದ್ರ, ಬಿ ಆರ್ ಜೋಯಪ್ಪ, ಸುಶೀಲಾ, ಸುನಿತಾ ಪಿ.ಪಿ, ಚಂದನ್ ಕಾಮತ್, ಪ್ರೇಮ ರಾಘವಯ್ಯ, ಕೆ.ವಿ.ಉಮೇಶ್, ಇನ್ನಿತರರು ಉಪಸ್ಥಿತರಿದ್ದರು. ರೇವತಿ ರಮೇಶ್ ಸ್ವಾಗತಿಸಿದರು. ಭಾರತಿ ರಮೇಶ್ ನಿರೂಪಿಸಿದರು.