ನೊಳಂಬ ಲಿಂಗಾಯತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊಸ ಆಲೋಚನೆ, ಅನ್ವೇಷಣೆ, ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕು ಎಂದು ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಅಧ್ಯಕ್ಷ ಬಿಳಿಗೆರೆ ಚಂದ್ರಶೇಖರ್ ಹೇಳಿದರು.

ಅರಸೀಕೆರೆ: ನೊಳಂಬ ಲಿಂಗಾಯತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊಸ ಆಲೋಚನೆ, ಅನ್ವೇಷಣೆ, ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕು ಎಂದು ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಅಧ್ಯಕ್ಷ ಬಿಳಿಗೆರೆ ಚಂದ್ರಶೇಖರ್ ಹೇಳಿದರು.

ನಗರದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯತ ಕೇಂದ್ರ ಹಾಗೂ ಸ್ಥಳೀಯ ಉಪಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಬದುಕಿನ ತಿರುವಿನ ಮಹತ್ವದ ಹಂತವಾಗಿದೆ ಎನ್ನುವುದನ್ನು ಮರೆಯಬಾರದು. ಗುರು, ಹಿರಿಯರ ಮಾರ್ಗದರ್ಶನ ಅತ್ಯವಶ್ಯವಾಗಿದ್ದು ಕಾಲೇಜು ಹಂತದಲ್ಲಿ ದೊರೆಯುವ ಶಿಕ್ಷಣದ ನೆರವಿನೊಂದಿಗೆ ಪ್ರತಿಭಾವಂತರು ಹೊಸ ಆವಿಷ್ಕಾರ, ಆಲೋಚನೆಗಳಿಗೆ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರವೇ ವಿದ್ಯೆಗೆ ಸಾರ್ಥಕತೆ ಬರಲಿದೆ. ಈ ನಿಟ್ಟಿನಲ್ಲಿ ಪುರಸ್ಕಾರ ಪಡೆದವರು ಗಂಭೀರ ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ನಿರ್ದೇಶಕ ಹಾಗೂ ನೊಳಂಬ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷ ಸಾಗರನಹಳ್ಳಿ ನಟರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪೂರಕವಾಗುವಂತೆ ಹಾಸ್ಟೆಲ್ ತೆರೆಯಲಾಗಿದೆ. ಮುಂಬರುವ ದಿನಗಳಲ್ಲಿ ನೊಳಂಬ ಲಿಂಗಾಯತ ಸಮಾಜಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಗತ್ಯವಿರುವ ವಿದ್ಯಾರ್ಥಿನಿಲಯ ಒಳಗೊಂಡಂತೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಯಳನಡು ಜಗದ್ಗುರು ಸಂಸ್ಥಾನದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎನ್ನುವ ಶರಣರ ಆಶಯದಂತೆ ಕಲಿತ ವಿದ್ಯೆ ಬದುಕಿಗೆ ದಾರಿದೀಪವಾಗಬೇಕು. ಸತತ ಪರಿಶ್ರಮದಿಂದ ನೀವು ಗಳಿಸಿರುವ ಅಂಕ ಉದ್ಯೋಗ ಪಡೆದು ದುಡಿಮೆಗೆ ನೆರವಾಗುತ್ತದೆ. ಮಕ್ಕಳು ಯಾವುದೇ ಕಾರಣಕ್ಕೂ ಪಾಲಕರನ್ನು ಕಡೆಗಾಲದಲ್ಲಿ ಕಡೆಗಣಿಸದಿರಿ ಎಂದು ಹೇಳಿದರು.

ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳು ಸಂಯಮ, ಸಂಸ್ಕಾರಭರಿತ ಜೀವನಕ್ಕೆ ಒತ್ತು ನೀಡಬೇಕು ಎಂದರು. ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಬದುಕಿನ ಅಮೂಲ್ಯ ಕ್ಷಣಗಳ ಸಾರ್ಥಕತೆ ಕುರಿತು ಸಂದೇಶ ನೀಡಿದರು.

ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಕಾಮನಕೆರೆ ಶಶಿಧರ್, ಉಪಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.90 ಅಂಕ ಗಳಿಸಿದ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಜಂಟಿ ಕಾರ್ಯದರ್ಶಿ ಸಿರಿ ಸಿದ್ದರಾಮೇಗೌಡ, ಕುಭೇರಪ್ಪ, ಉಪಸಮಿತಿ ಅಧ್ಯಕ್ಷ ರಾಂಪುರ ಜಯಣ್ಣ, ಕಾರ್ಯದರ್ಶಿ ಶಿವಕುಮಾರ್, ನಿಕಟಪೂರ್ವ ಅಧ್ಯಕ್ಷ ಜಾವಗಲ್ ರಾಜಶೇಖರ್, ಎಂಜಿನಿಯರ್ ಪ್ರಸಾದ್, ಬೇಲೂರು ರಾಜಶೇಖರ್, ಬೆಳಗುಂಬ ಬಾಬು, ಬೋರೆಹಳ್ಳಿ ಸೋಮಶೇಖರ್, ಬೇಲೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ಶೇಖರ್ ಸಂಕೋಡನಹಳ್ಳಿ, ವಕೀಲ ವಿವೇಕ್, ದೇವರಾಜ್, ಅಶೋಕ್, ರಂಗಾಪುರ ಶಿವಶಂಕರ್, ವಿರೂಪಾಕ್ಷಪ್ಪ, ತೇಜಮೂರ್ತಿ, ಸುನಿಲ್, ಬಲ್ಲೇನಹಳ್ಳಿರವಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸದಾನಂದ, ನವೀನ್ ಕುಮಾರ್, ನಿರಂಜನ್ ಹಾಜರಿದ್ದರು.