ಶುಲ್ಕ ಏರಿಕೆ: ದುಬಾರೆ ಸಾಕಾನೆ ಶಿಬಿರ ಪ್ರವೇಶ ದುಬಾರಿ!

| Published : Sep 05 2024, 12:33 AM IST

ಸಾರಾಂಶ

ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ಇದರಿಂದ ದುಬಾರೆ ಪ್ರವಾಸಿ ತಾಣ ಪ್ರವಾಸಿಗರಿಗೆ ತುಂಬಾ ದುಬಾರಿಯಾಗಿಯೂ ಪರಿಣಮಿಸಿದೆ. ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ಥಳೀಯರಿಗೂ ಯಾವುದೇ ರಿಯಾಯಿತಿ ಇಲ್ಲದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ಇದರಿಂದ ದುಬಾರೆ ಪ್ರವಾಸಿ ತಾಣ ಪ್ರವಾಸಿಗರಿಗೆ ತುಂಬಾ ದುಬಾರಿಯಾಗಿಯೂ ಪರಿಣಮಿಸಿದೆ.

ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ಥಳೀಯರಿಗೂ ಯಾವುದೇ ರಿಯಾಯಿತಿ ಇಲ್ಲದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಕುಶಾಲನಗರ ಸಮೀಪದಲ್ಲಿರುವ ದುಬಾರೆ ಪ್ರವಾಸಿ ತಾಣ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಇಲ್ಲಿ ಸುಮಾರು 30ಕ್ಕೂ ಅಧಿಕ ಸಾಕಾನೆಗಳಿವೆ. ರಾಜ್ಯದ ವಿವಿಧಡೆ ಸೆರೆ ಹಿಡಿದ ಕಾಡಾನೆಗಳನ್ನು ಪಳಗಿಸುವ ಕೇಂದ್ರ ಕೂಡ ಆಗಿರುವುದರಿಂದ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆನೆಗಳ ಆಟ-ತುಂಟಾಟ, ಆನೆಗಳನ್ನು ಸ್ನಾನ ಮಾಡಿಸುವುದು, ಆಹಾರ ನೀಡುವುದು ಸೇರಿದಂತೆ ಇತರೆ ಚಟುವಟಿಕೆಗಳು ಇಲ್ಲಿ ಇರುವುದರಿಂದ ಪ್ರವಾಸಿಗರನ್ನು ಮಾತ್ರವಲ್ಲದೆ ಸ್ಥಳೀಯರನ್ನು ಕೂಡ ದುಬಾರೆ ಸೆಳೆಯುತ್ತಿದೆ. ಆದರೆ ಶುಲ್ಕ ಏರಿಕೆ ಮಾಡಿರುವುದರಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ದುಬಾರೆ ಹೊರೆಯಾಗಿ ಪರಿಣಮಿಸಿದೆ.

ಕಳೆದ ಕೆಲವು ವರ್ಷಗಳಿಂದ ದುಬಾರೆ ಸಾಕಾನೆ ಶಿಬಿರ ಪ್ರವೇಶಕ್ಕೆರು.100 ಇತ್ತು. ಅದನ್ನು ಕೆಲ ತಿಂಗಳ ಹಿಂದೆ ರು.150ಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ ರು.180ಕ್ಕೆ ಏರಿಕೆ ಮಾಡಲಾಗಿದೆ.

ಪ್ರಸ್ತುತ ದುಬಾರೆಗೆ ಆಗಮಿಸುವ ಒಬ್ಬ ಪ್ರವಾಸಿಗರಿಗೆ ಬೋಟಿಂಗ್ ಸಹಿತ 180, ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ರು.275 ನಿಗofಪಡಿಸಲಾಗಿದ್ದು, ಅರಣ್ಯ ಇಲಾಖೆಯ ಈ ನಿರ್ಧಾರಕ್ಕೆ ಸ್ಥಳೀಯರು ಹಾಗೂ ಕೆಲ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸಾಕಾನೆಗಳಿಗೆ ಆಹಾರ ಮತ್ತಿತರ ನಿರ್ವಹಣೆಗೆ ಸರ್ಕಾರವೇ ಹಣ ವೆಚ್ಚ ಮಾಡುತ್ತದೆ. ಆದರೆ ಪ್ರವಾಸಿಗರಿಂದ ಸಂಗ್ರಹವಾಗುವ ಹಣವನ್ನು ಕೂರ್ಗ್ ಫೌಂಡೇಷನ್ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಮಾನವ - ಆನೆ ಸಂಘರ್ಷ ಪರಿಹಾರ, ಇತರೆ ಕಾರ್ಯಚಟುವಟಿಕೆಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೆ ಪ್ರವಾಸಿ ತಾಣಕ್ಕೆ ಶುಲ್ಕ ಏರಿಕೆ ಮಾಡಿರುವುದು ಸರ್ಕಾರದ ಉಚಿತ ಯೋಜನೆಯಿಂದ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನವಿ ಸಲ್ಲಿಕೆ: ದುಬಾರೆಯಲ್ಲಿ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ದುಬಾರೆಯ ಸ್ಥಳೀಯರು , ವ್ಯಾಪಾರಸ್ಥರು ಹಾಗೂ ನೌಕರರು ಮಡಿಕೇರಿ ಶಾಸಕ ಡಾ. ಮಂlರ್ ಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ದಿಢೀರನೆ ಪ್ರವೇಶ ಶುಲ್ಕ ಏರಿಸಿರುವುದು ಪ್ರವಾಸಿಗರಲ್ಲಿ ಹಾಗೂ ಸ್ಥಳೀಯರಿಗೆ ತೀರಾ ತೊಂದರೆಯುಂಟಾಗಿದೆ. ಅಲ್ಲದೆ ಮಂಗಳವಾರ ದುಬಾರೆ ರಜೆಯ ದಿನವಾಗಿ ಆದೇಶಿಸಲಾಗಿದೆ. ಇದರಿಂದ ದುಬಾರೆಯಲ್ಲಿ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖ ಕಾಣುತ್ತಿದ್ದು, ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ವ್ಯಾಪಾರಿಗಳು ಹಾಗೂ ನೌಕರರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಶಾಸಕರು ಆದಷ್ಟು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

..........................

ಶೀಘ್ರ ತೂಗು ಸೇತುವೆ ನಿರೀಕ್ಷೆ

ಪ್ರವಾಸಿ ತಾಣ ದುಬಾರೆಗೆ ಭೇಟಿ ನೀಡಬೇಕೆಂದರೆ ಕಾವೇರಿ ನದಿ ದಾಟಬೇಕು. ಮಳೆಗಾಲದಲ್ಲಿ ಬೋಟ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಆದರೆ ಬೇಸಗೆಯಲ್ಲಿ ಬೋಟ್ ಗಳು ಸಂಚರಿಸಲು ಅಸಾಧ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರವಾಸಿಗರು ನದಿಯಲ್ಲಿ ಅಪಾಯದ ನಡುವೆ ನಡೆದಾಡುವ ಪರಿಸ್ಥಿತಿ ಉಂಟಾಗಿದೆ.

ಕಳೆದ ಹಲವು ವರ್ಷಗಳಿಂದಲೂ ಕೂಡ ದುಬಾರೆಗೆ ತೂಗು ಸೇತುವೆ ಯೋಜನೆ ಪ್ರಸ್ತಾಪವಿದೆ. ಇದೀಗ ಈ ಯೋಜನೆಗೆ ಆದಷ್ಟು ಕೂಡಲೇ ಆಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದು, ಆದಷ್ಟು ಶೀಘ್ರ ಆಗಲಿ ಎಂಬುದು ಹಲವರ ಬೇಡಿಕೆಯಾಗಿದೆ.

.....................

ದುಬಾರೆಯಲ್ಲಿನ ಅಭಿವೃದ್ಧಿ ಹಾಗೂ ಆನೆ ಮಾನವ ಸಂಘರ್ಷ ಪರಿಹಾರ ದೃಷ್ಟಿಯಿಂದಾಗಿ ದುಬಾರೆಯಲ್ಲಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದೆ. ಪ್ರವಾಸಿಗರು ದುಬಾರೆಗೆ ಆಗಮಿಸಲು ತೂಗು ಸೇತುವೆ ಕೂಡ ನಿರ್ಮಿಸಲಾಗುತ್ತಿದ್ದು, ಕ್ರಿಯಾ ಯೋಜನೆಗೆ ಅನುಮತಿ ದೊರಕಿದೆ. ಆದಷ್ಟು ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ.

-ಭಾಸ್ಕರ್, ಡಿಎಫ್ಒ ಮಡಿಕೇರಿ.