ಮಕ್ಕಳು ಪೋಷಕರನ್ನು ಪೋಷಿಸಿ ಋಣ ತೀರಿಸಬೇಕು: ಶಿವಸ್ವಾಮಿ ಸಲಹೆ

| Published : Mar 05 2024, 01:40 AM IST

ಮಕ್ಕಳು ಪೋಷಕರನ್ನು ಪೋಷಿಸಿ ಋಣ ತೀರಿಸಬೇಕು: ಶಿವಸ್ವಾಮಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಬದುಕಿದಷ್ಟು ದಿನಗಳಲ್ಲಿ ಒಂದಲ್ಲಾ ಒಂದು ರೀತಿ ತಮ್ಮ ಕೈಲಾದ ಸಮಾಜಸೇವೆ ಮಾಡುವ ಮೂಲಕ ನೆರವಾಗುವ ಮನೋಭಾವನೆ ಮೂಡಬೇಕಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ತಂದೆ-ತಾಯಿಯರನ್ನು ಅನಾಥಾಶ್ರಮಕ್ಕೆ ದೂಡದೆ ಮಕ್ಕಳು ತಮ್ಮ ಜೊತೆಗೇ ಪೋಷಿಸುವ ಮೂಲಕ ಅವರ ಋಣವನ್ನು ತೀರಿಸಬೇಕು ಎಂದು ನಗರಸಭೆ ಸದಸ್ಯ ಶಿವಸ್ವಾಮಿ (ಅಪ್ಪಿ) ಹೇಳಿದರು.

ತಾಲೂಕಿನ ಲಕ್ಷ್ಮೀಪುರ ಗ್ರಾಮದ ಅಮೃತ ವಿಕಲಚೇತನರ ವೃದ್ಧಾಶ್ರಮದಲ್ಲಿ ಲಯನ್ಸ್ ಮತ್ತು ಕಲಾಪ್ರಿಯ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಆಹಾರ ಪದಾರ್ಥಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯ ಬದುಕಿದಷ್ಟು ದಿನಗಳಲ್ಲಿ ಒಂದಲ್ಲಾ ಒಂದು ರೀತಿ ತಮ್ಮ ಕೈಲಾದ ಸಮಾಜಸೇವೆ ಮಾಡುವ ಮೂಲಕ ನೆರವಾಗುವ ಮನೋಭಾವನೆ ಮೂಡಬೇಕಿದೆ. ಮಕ್ಕಳಿಂದ ದೂರವಾದ ಹಿರಿಯ ಜೀವಗಳಿಗೆ ಅನಾಥಾಶ್ರಮ ನೆರವಾಗಿದೆ. ದೇವರ ಮಕ್ಕಳಂತೆ ಅವರನ್ನು ಕಾಪಾಡುವ ಜವಾಬ್ದಾರಿ ವಹಿಸಿರುವ ರಮೇಶ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಅನಾಥಾಶ್ರಮಗಳು ಇಲ್ಲದಿದ್ದಲ್ಲಿ ಎಷ್ಟೋ ಜನರು ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳದಲ್ಲಿ ಊಟ ಬಟ್ಟೆ, ಸ್ನಾನ ವಿಲ್ಲದೆ ಅನಾರೋಗ್ಯದಿಂದ ದೇಹ ತ್ಯಜಿಸಬೇಕಿತ್ತು. ಅಂತಹ ಸಮಯದಲ್ಲಿ ರಮೇಶ್ ಅವರು ಗ್ರಾಮೀಣ ಭಾಗದಲ್ಲಿ ಅನಾಥಾಶ್ರಮ ತೆರೆದು ಹಿರಿಯ ಜೀವಿಗಳನ್ನು ಪಾಲನೆ ಮಾಡುತ್ತಿದ್ದಾರೆ, ಇಂದು ನಾನು ಅಳಿಲು ಸೇವೆ ಮಾಡಿದ್ದು, ಪ್ರತಿ ತಿಂಗಳು ನನ್ನ ಕೈಲಾದ ನೆರವು ನೀಡುವುದಾಗಿ ಶಿವಸ್ವಾಮಿ ಹೇಳಿದರು.

ಆಯುಷ್ ಇಲಾಖೆಯ ಅಧಿಕಾರಿ ಹೇಮಂತ್ ಮಾತನಾಡಿ, ನಿರಾಶ್ರಿತರನ್ನು ಗುರುತಿಸಿ ಅವರಿಗೆ ಅನಾಥಾಶ್ರಮದಲ್ಲಿ ಪ್ರೇರೇಪಣೆಯಾಗುವ ಹೊಸ ಜೀವನವನ್ನು ಕಲ್ಪಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿ, ಅವರಿಗೆ ಊಟ-ತಿಂಡಿ ಕೊಡುವ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನೀಡುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ. ಇಂತಹ ಕಾರ್ಯಕ್ಕೆ ಸಮಾಜ ಸೇವಕರು ನೆರವು ನೀಡುವ ಕೆಲಸ ಮಾಡಬೇಕಿದೆ ಎಂದರು.

ಅಮೃತ ವಿಕಲ ಚೇತನ ವೃದ್ಧಾಶ್ರಮದ ಸಂಸ್ಥಾಪಕ ರಮೇಶ್ ಮಾತನಾಡಿ, ನಾನು ಅನಾಥಾಶ್ರಮದಲ್ಲಿ ಹಿರಿಯರಿಗೆ ಮಾಡುತ್ತಿರುವ ಸೇವೆ ದೇವರಿಗೆ ಮಾಡುತ್ತಿರುವ ಸೇವೆ ಎಂದು ಭಾವಿಸಿದ್ದೇನೆ. ಸಾರ್ವಜನಿಕರ ನೆರವಿನಲ್ಲಿ ಆಶ್ರಯ ನೀಡುವ ಕೆಲಸ ಮಾಡುತ್ತಿದ್ದು, ಇನ್ನೂ ಒಂದು ದೊಡ್ಡ ಗುರಿ ನನ್ನಲ್ಲಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಸುಧಾರಾಣಿ , ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಜೊತೆಗೆ ಸೇತುವೆಯ ರೀತಿಯಲ್ಲಿ ದಾನಿಗಳಿಂದ ನೆರವು ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಸೇವಾ ಮನೋಭಾವನೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವ ಕೆಲಸ ಮಾಡುತ್ತಿದ್ದೇವೆ, ಅನಾಥಾಶ್ರಮಕ್ಕೆ ನೆರವು ನೀಡುವ ಮೂಲಕ ಸದಾ ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಹೇಳಿದರು.

ವೃದ್ದಾಶ್ರಮಕ್ಕೆ ನಗರಸಭಾ ಸದಸ್ಯ ಶಿವಸ್ವಾಮಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಿದರು. ಅಮೃತ ವಿಕಲಚೇತನರ ವೃದ್ದಾಶ್ರಮದ ಸಪ್ನಾ ರಮೇಶ್, ಲಯನ್ಸ್‌ನ ಕಾರ್ಯದರ್ಶಿ ವಿಜಯಲಕ್ಷ್ಮೀ, ಖಜಾಂಚಿ ನಿರ್ಮಲಾ, ನಿರ್ದೇಶಕಿ ಶಾಂತಮ್ಮ, ಶಾರದಾ, ಹೇಮಾವತಿ, ಕವಿತಾ, ಗೀತಾ, ಹೇಮಲತಾ, ಕಲಾಪ್ರಿಯ ಟ್ರಸ್ಟ್ ಕಾರ್ಯದರ್ಶಿ ಅರುಣ್ ಮತ್ತಿತರರು ಹಾಜರಿದ್ದರು.