ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಬಿಬಿಎಂಪಿ ಅನ್ಯಾಯ: ದೂರು

| Published : Mar 05 2024, 01:40 AM IST

ಸಾರಾಂಶ

ಎಸ್‌ಟಿ/ಎಸ್‌ಟಿ ಗುತ್ತಿಗೆದಾರರಿಗೆ ಟೆಂಡರ್‌ ನೀಡುವಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮತ್ತು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್‌ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್‌.ಮಹದೇವಸ್ವಾಮಿ ದೂರು ನೀಡಿದ್ದಾರೆ. ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಟೆಂಡರ್‌ ಪ್ರಕ್ರಿಯೆಯನ್ನು ಕೈಗೊಂಡು ಗುತ್ತಿಗೆ ವಹಿಸುವುದು ಕಡ್ಡಾಯವಾಗಿದೆ. ಅಂತೆಯೇ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ 50 ಲಕ್ಷ ರು.ಗೆ ಬದಲಿಗೆ ಒಂದು ಕೋಟಿ ರು. ಮೀರದಂತೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡಬೇಕು ಎಂದು ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಈ ನಿಯಮವನ್ನು ಟೆಂಡರ್‌ ಪ್ರಕ್ರಿಯೆಯನ್ನು ಕೈಗೊಂಡು ಗುತ್ತಿಗೆ ವಹಿಸುವಾಗ ಪಾಲನೆ ಮಾಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಆದರೆ, ಅಧಿಕಾರಿಗಳು ಇದನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಪ್ರಾರಂಭವಾಗುವ ಕಾಮಗಾರಿಗಳನ್ನು 485 ಕೋಟಿ ರು. ಗಳ ಪರಿಷ್ಕೃತ ಕ್ರಿಯಾಯೋಜನೆಯನ್ನು ಸರ್ಕಾರದಿಂದ ಅನುಮೋದನೆ ಪಡೆಯಲು ಶಿಫಾರಸ್ಸು ಮಾಡಲಾಗಿದೆ. ಈ ವೇಳೆ 127 ಕಾಮಗಾರಿಗಳು ಒಂದು ಕೋಟಿ ರು.ಗೆ ಮೀರದಂತಹ ಕಾಮಗಾರಿಗಳಾಗಿವೆ. ಕ್ರಿಯಾಯೋಜನೆ ಪಡೆಯುವಾಗ ಅಧಿಕಾರಿಗಳು ಮೀಸಲಾತಿ ತಿದ್ದುಪಡಿಯನ್ನು ಮರೆಮಾಚಿ ಬೇಜವಾಬ್ದಾರಿತನ ಪ್ರದರ್ಶಿಸಲಾಗಿದೆ. ಈ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಹೊರಡಿಸಿರುವ ಅದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.