ಚಿತ್ರದುರ್ಗ: ರೈತರ ಧರಣಿಗೆ ಆಮ್ ಆದ್ಮಿ ಪಕ್ಷ ಬೆಂಬಲ

| Published : Feb 19 2024, 01:33 AM IST

ಸಾರಾಂಶ

ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಆಗ್ರಹಿಸಿ ನಡೆಯುತ್ತಿರುವ ರೈತ ಸಂಘದ ಧರಣಿಗೆ ಬೆಂಬಲ ಸೂಚಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾಮೇಲ್ದಂಡೆಗೆ ₹5300 ಕೋಟಿ ಬಿಡುಗಡೆ ಮಾಡದಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತ ಸಂಘದ ವತಿಯಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿಗೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ.

ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಹದಿನೈದು ವರ್ಷಗಳಿಂದಲೂ ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಯೋಜನೆ ಜಾರಿಗೆ ತರದೆ ರೈತರಿಗೆ ಮಂಕು ಬೂದಿ ಎರಚುತ್ತಿರುವ ಸರ್ಕಾರಗಳು ಸುಳ್ಳು ಆಶ್ವಾಸನೆ ನೀಡುತ್ತ ಕಾಲ ಕಳೆಯುತ್ತಿವೆ. ರೈತರನ್ನು ಕೇವಲ ಓಟಿಗಾಗಿ ಬಳಸಿಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ ಜಾರಿಗೊಳಿಸಿ ನೀರು ಹರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆಂದು ಎಚ್ಚರಿಸಿದರು.

ಬರಗಾಲದ ಜಿಲ್ಲೆ ನಮ್ಮದು, ಸಮಗ್ರ ನೀರಾವರಿಯಾಗಬೇಕು. ಪಾರ್ಲಿಮೆಂಟ್‍ಗೆ ಇಲ್ಲಿಂದ ಆಯ್ಕೆಯಾಗಿ ಹೋಗಿರುವವರಿಗೆ ಪ್ರಧಾನಿ ಮೋದಿ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರುಗಳಿಗೆ ಇಚ್ಚಾಶಕ್ತಿಯಿಲ್ಲವೆಂದು ಜಗದೀಶ್ ಆಪಾದಿಸಿದರು.

ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿ ರಾಮಣ್ಣ, ಕಾರ್ಯಾಧ್ಯಕ್ಷ ನಿಸಾರ್ ಅಹಮದ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ತನ್ವಿರ್, ಉಪಾಧ್ಯಕ್ಷ ಲೋಕಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಲಕ್ಷ್ಮಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಧರಣಿಯಲ್ಲಿ ಭಾಗವಹಿಸಿದ್ದರು.