ಸಾರಾಂಶ
ಆನಂದಪುರ ಸಮೀಪದ ಮುರುಘ ಮಠದಲ್ಲಿ ನಡೆದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಕಾರ್ಯಕ್ರಮವನ್ನು ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿ, ಮಾತನಾಡಿದರು.
ಕನ್ನಡಪ್ರಭ ವಾರ್ತೆ ಆನಂದಪುರ
ಇಡೀ ಮನುಕುಲಕ್ಕೆ ಮನುಷ್ಯರು ಮೌಲ್ಯಯುತವಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿದ ಮಹಾನ್ ಚೇತನ ಬಸವಣ್ಣ ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಜಿ ಹೇಳಿದರು.ಇಲ್ಲಿನ ಮುರುಘಮಠದಲ್ಲಿ ಶನಿವಾರ ನಡೆದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಕ್ರಾಂತಿ ವಿಶ್ವದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತದ್ದು ಎಂದರು.ಸಮಾಜದಲ್ಲಿನ ಅರ್ಥ ರಹಿತ ಆಚಾರ ವಿಚಾರಗಳಿಂದ, ಮೇಲು-ಕೀಳು ಎಂಬ ಭಾವನೆಗಳಿಂದ, ಸ್ತ್ರೀ- ಪುರುಷ ಎಂಬ ಲಿಂಗ ಭೇದ ತಾರತಮ್ಯದಿಂದ, ಶ್ರೀಮಂತ, ಬಡವ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ಹಾಳಾಗಿ ಹೋಗಿತ್ತು. ಇದರ ವಿರುದ್ಧ ತಮ್ಮ ವಿಶಿಷ್ಟವಾದ ಮಾನವೀಯ ಮೌಲ್ಯಗಳ ಆಧಾರದ ಮೇಲೆ ನೈತಿಕ ಸೂತ್ರಗಳ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ ಸಾಮಾಜಿಕ ಹೋರಾಟದ ಹರಿಕಾರ ಭಕ್ತಿ ಬಂಡಾರ ಬಸವಣ್ಣ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡ್ ಮಾತನಾಡಿ, ಬಸವಣ್ಣನವರ ಉತ್ತಮ ಮೌಲ್ಯ ಹಾಗೂ ತತ್ವ ಆದರ್ಶಗಳನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ತಿಳಿಸಿದಂಥ ಶ್ರೇಷ್ಠ ವ್ಯಕ್ತಿ. ಬಸವಣ್ಣನವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗುತ್ತಿಗೆದಾರ ರೆಹಮಾನ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.