ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಂಭ್ರಮದಿಂದ ಆಚರಿಸಿದರು.ಜಿಲ್ಲೆಯ ಎಲ್ಲ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಯೇಸುಕ್ರಿಸ್ತರು ಗೋದಲಿಯಲ್ಲಿ ಜನಿಸಿದ ನಂಬಿಕೆಯ ಹಿನ್ನೆಲೆಯಲ್ಲಿ ಚರ್ಚ್‌ಗಳು, ಮನೆಗಳಲ್ಲಿ ಗೋದಲಿ ಮಾದರಿಗಳು ಪ್ರಮುಖ ಆಕರ್ಷಣೆಯಾಗಿತ್ತು. ಸಾಂತಾ ಕ್ಲಾಸ್ ವೇಷಧಾರಿಗಳು ಕ್ರಿಸ್‌ಮಸ್ ಆಚರಣೆಗೆ ರಂಗು ತುಂಬಿದರು.
ಮಂಗಳವಾರ ರಾತ್ರಿ ಚರ್ಚ್‌ಗಳಲ್ಲಿ ಕ್ರಿಸ್ಮಸ್ ವಿಶೇಷ ಪೂಜೆಯಲ್ಲಿ ಭಾಗವಹಿಸದೆ ಇರುವ ಭಕ್ತರು ಬುಧವಾರದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.ಬಿಷಪ್ ಸಂದೇಶ: ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಅವರು ನಂತೂರಿನ ಬ್ರಿಜ್‌ಟೈನ್ ಭಗಿನಿಯರ ಕಾನ್ವೆಂಟ್‌ನಲ್ಲಿ ಬುಧವಾರ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭ ಹಬ್ಬದ ಸಂದೇಶ ನೀಡಿದ ಅವರು, ದೇವರು ಸಾಮಾನ್ಯ ಮನುಷ್ಯರಂತೆ ಜೀವಿಸಿ, ನಮಗಾಗಿ ತಮ್ಮ ಅಮೂಲ್ಯ ಜೀವವನ್ನು ತ್ಯಾಗ ಮಾಡಿದ್ದಾರೆ. ನಾವು ದೇವರೊಂದಿಗೆ ಬದುಕಲು ಕಲಿಯಬೇಕು ಎಂದರು. ವಿವಿಧ ಚರ್ಚ್‌ಗಳ ಧರ್ಮಗುರುಗಳು ಭಾಗವಹಿಸಿದ್ದರು.
ನಗರದ ಪ್ರಮುಖ ಚಚ್‌ರ್ಗಳಾದ ರೊಸಾರಿಯೋ ಕೆಥೆಡ್ರಲ್, ಮಿಲಾಗ್ರಿಸ್, ಲೇಡಿಹಿಲ್, ಅಶೋಕನಗರ, ಕೂಳೂರು, ಬೆಂದೂರ್ ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ಬುಧವಾರದ ಬಲಿಪೂಜೆ ನಡೆದು, ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.ಕ್ರಿಸ್‌ಮಸ್ ಹಬ್ಬದ ವಿಶೇಷ ತಿನಿಸಾದ ಕುಸ್ವಾರ್, ಕೇಕ್‌ಗಳನ್ನು ಪರಿಚಿತರು, ಸ್ನೇಹಿತರು, ನೆರೆಹೊರೆಯವರಿಗೆ ಹಂಚಿದರು. ಸಂಜೆ ವೇಳೆ ಕೆಲವು ಚರ್ಚ್‌ಗಳಲ್ಲಿ ಹಬ್ಬದ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ತಿಂಗಳಿಂದ ಸಿದ್ಧತೆ: ಬಹುತೇಕ ಚರ್ಚ್‌ಗಳಲ್ಲಿ ಸುಮಾರು ಒಂದು ತಿಂಗಳ ಹಿಂದೆಯೇ ಗೋದಲಿ ಮಾದರಿಗೆ ಸಿದ್ಧತೆ ಆರಂಭಿಸಲಾಗಿತ್ತು. ಈ ಗೋದಲಿಗಳು ವರ್ಷಾಂತ್ಯದವರೆಗೂ ಇರಲಿವೆ.