ಕನ್ನಡಪ್ರಭ ವಾರ್ತೆ ಬೀರೂರು

ಸಮಾಜದ ಪ್ರತಿಯೊಬ್ಬರೂ ಸಮಬಾಳು ಸಮಪಾಲು ಪಡೆಯಲು ನೆರವಾಗುವ ಕಲ್ಯಾಣ ರಾಜ್ಯ ಸ್ಥಾಪನೆ ಹಾಗೂ ಜೀತ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸುವ ಮೂಲಕ ಶ್ರಮಿಸಬೇಕು ಎಂದು ಕಡೂರು ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ಕರೆ ನೀಡಿದರು. ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಾಲುಪರ್ಸ್ ಸಹಯೋಗದಲ್ಲಿ ಬೀರೂರಿನ ಮಾಲುಸೀಪರ್ಸ್ನ ಆವರಣದಲ್ಲಿ ನಡೆದ ಜೀತಪದ್ಧತಿ ನಿರ್ಮೂಲನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜೀತ ಪದ್ಧತಿ ವಿಮುಕ್ತಿಗೆ ಕಾನೂನು ಜಾರಿಯಾಗಿ 50 ವರ್ಷಗಳೇ ಕಳೆದರೂ, ಇನ್ನೂ ಜೀತಪದ್ಧತಿ ಚಾಲ್ತಿಯಲ್ಲಿರುವುದು ದುರ್ದೈವ. ನಮ್ಮ ಪಕ್ಕದ ತಾಲೂಕಿನಲ್ಲಿ ಈಗಲೂ ಜೀತಪದ್ಧತಿ ಆಚರಣೆಯಲ್ಲಿದೆ ಎನ್ನುವ ಮಾಹಿತಿ ಇದೆ. ತಾಲೂಕು ದಂಡಾಧಿಕಾರಿಗೆ ಅಂಥವರ ವಿರುದ್ಧ ಕ್ರಮ ಜರುಗಿಸುವ ಅಧಿಕಾರವಿದ್ದು, ಸರ್ಕಾರದಿಂದ ರಚನೆಯಾದ ಸಮಿತಿಗಳೂ ಅಸ್ತಿತ್ವ ದಲ್ಲಿವೆ ಯಾರಿಗೆ ಮಾಹಿತಿ ದೊರೆತರೂ ಇವರಿಗೆ ಅಥವಾ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಕಾರ್ಖಾನೆಯಲ್ಲಿ ಮಾಲೀಕರು, ಕಾರ್ಮಿಕರ ನಡುವೆ ಸಮನ್ವಯ ಮತ್ತು ಸೌಹಾರ್ದದ ವಾತಾವರಣ ಇರುವುದು ಶ್ಲಾಘನೀಯ ಎಂದರು.ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾತನಾಡಿ, ''''''''ಸ್ವತಂತ್ರವಾಗಿ ಬದುಕುವ ಹಕ್ಕು ಕಳೆದುಕೊಂಡು ಜೀವಿಸುವುದೇ ಜೀತ, ಇಂತಹ ಅನಿಷ್ಟ ಪದ್ಧತಿಯನ್ನು ಕಾನೂನಿನ ನೆರವಿನಿಂದಲೇ ನಿರ್ಮೂಲನೆಗೊಳಿಸಬೇಕಿದೆ. ಕಡಿಮೆ ವೇತನ, ಹೆಚ್ಚು ಕೆಲಸ, ಮೂಲ ಭೂತ ಸೌಕರ್ಯಗಳಿಂದ ವಂಚಿಸಿ ನಿರ್ಬಂಧದಲ್ಲಿ ದುಡಿಸಿಕೊಳ್ಳುವುದು ತಪ್ಪು. ಇಂತಹ ಅಮಾನವೀಯ ವ್ಯವಸ್ಥೆ ತೊಡೆದುಹಾಕಲು ಎಲ್ಲರಿಗೂ ಕಾನೂನಿನ ಅರಿವು ಮುಖ್ಯ ಎಂದರು.ಹಿರಿಯ ವಕೀಲ ಕೆ.ಎನ್. ಬೊಮ್ಮಣ್ಣ ಮಾತನಾಡಿ, ಕಲ್ಲು ಗಣಿಗಾರಿಕೆ, ಕಾಫಿ ತೋಟಗಳು, ಅಲೆಮಾರಿ ಸಮುದಾಯದಲ್ಲಿ ಇಂತಹ ಪದ್ಧತಿಗಳು ಇನ್ನೂ ಜೀವಂತವಿದೆ. ನಮ್ಮಂತೆಯೇ ಜೀವ ಇರುವವರನ್ನು ನಿರ್ಬಂಧಿತ ವಿಧಾನದಲ್ಲಿ ದುಡಿಸಿ ಕೊಳ್ಳುವುದು ತಪ್ಪು ಹಾಗೂ ದಂಡನಾರ್ಹ. ಯಾರದ್ದೋ ಕೃತ್ಯಕ್ಕೆ ಇನ್ನೊಬ್ಬರು ದುಡಿಯುವಂತೆ ಮಾಡುವ ಬಾಲಕಾರ್ಮಿಕ, ಜೀತ ಪದ್ಧತಿ ಎರಡೂ ಒಂದೇ ಆಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೂಲಿ ಕಾರ್ಮಿಕರ, ಮಹಿಳ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಎಲ್ಲ ಇಲಾಖೆಗಳೂ ಒಗ್ಗೂಡಿ ಅರಿವು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಪ್ರಭಾವದಿಂದ ಜೀತ ಪದ್ಧತಿ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.ವಕೀಲ ಕೃಷ್ಟ ಕೀರ್ತಿ ಉಪನ್ಯಾಸ ನೀಡಿ ಕಾನೂನು ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ ಎನ್ನುತ್ತದೆ. ತಪ್ಪು, ಅಸಮಾನತೆ ವಿರುದ್ಧ ಹೋರಾಡಿ ನ್ಯಾಯ ಒದಗಿಸುವುದೂ ಸಾಧನೆಯೇ ಆಗಿದೆ. ಮಕ್ಕಳ ಹಕ್ಕುಗಳಿಗೆ ಗ್ರಾಮಸಭೆಗಳ ಮೂಲಕ ಶ್ರಮಿಸಲಾಗುತ್ತಿದೆ. ಜೀತ ವಿಮುಕ್ತಿ ಕಾನೂನಿನಲ್ಲಿ ಲಿಂಗ ತಾರತಮ್ಯ, ವಲಸೆ ಕಾರ್ಮಿಕರ ಶೋಷಣೆ ತಡೆಯುವ, ಅವರಿಗೆ ಉಚಿತ ಶಿಕ್ಷಣ, ಬದುಕಿಗೆ ಧನಸಹಾಯ ವಸತಿ ಕಲ್ಪಿಸುವ ಅವಕಾಶಗಳಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸೀಪರ್ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ವೆಂಕಟೇಶ ಜಿ. ಒಡೆಯರ್, ಕೈಗಾರಿಕೆಗಳು ಇಂತಹ ಕಾರ್ಯ ಕ್ರಮಗಳ ಆಯೋಜನೆ ಮೂಲಕ ಕಾರ್ಮಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕು. ಆತ್ಮಗೌರವ ಮಾರಿಕೊಂಡು ಮಾಡುವ ಕೆಲಸವೇ ಜೀತವಾಗಿದ್ದು ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯುವುದು ನಿಮ್ಮ ಹಕ್ಕು ಆಗಿದೆ ಎಂದರು

ಕಾರ್ಮಿಕ ಇಲಾಖೆ ಪ್ರವೀಣ್, ಹ್ಯಾರಿಸ್, ಮಾಲು ಸೀಪರ್ ಪ್ರಭುಸ್ವಾಮಿ, ಶಶಿ, ಜಯರಾಮ್, ರೈಲ್ವೆ ಬಳಕೆದಾರರ ಸಮಿತಿಯ ವಿನಯ್ ಕುಮಾರ್, ಎಎಸ್ಐ ನಾಗರಾಜ್, ಕಾರ್ಮಿಕರು ಇದ್ದರು.13 ಬೀರೂರು 1ಬೀರೂರಿನ ಮಾಲುಸೀಪರ್ಸ್ ಆವರಣದಲ್ಲಿ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಪ್ರಚಾರ ವಾಹನ ಕಲ್ಯಾಣರಥಕ್ಕೆ ಕಡೂರು ಜೆಎಂಎಫ್ಸಿ ಹಿರಿಯ ಸಿಎಂ ನ್ಯಾಯಾಧೀಶ ಇರ್ಫಾನ್, ತಹಸೀಲ್ಮಾರ್ ಸಿ.ಎಸ್. ಪೂರ್ಣಿಮಾ, ವಂಕಟೇಶ ಚಿ ಒಡೆಯರ್, ಕೆ.ಎನ್ ಬೊಮ್ಮಣ್ಣ ಹಸಿರು ಬಾವುಟ ತೋರಿ ಚಾಲನೆ ನೀಡಿದರು.