ವಿವಿಧೆಡೆ ಚೆಕ್‍ಪೋಸ್ಟ್‌ಗಳಿಗೆ ಸಿಇಒ ಭೇಟಿ, ಪರಿಶೀಲನೆ

| Published : Apr 01 2024, 12:50 AM IST

ಸಾರಾಂಶ

ಚಿತ್ರದುರ್ಗ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‌ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‌ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಚಳ್ಳಕೆರೆ ನಗರದ ಕೆಇಬಿ ಚೆಕ್‍ಪೋಸ್ಟ್, ಬಳ್ಳಾರಿ ರಸ್ತೆಯ ನಾಯಕನಹಟ್ಟಿ ಕ್ರಾಸ್ ಚೆಕ್‍ಪೋಸ್ಟ್ ಹಾಗೂ ಚಳ್ಳಕೆರೆ ತಾಲ್ಲೂಕಿನ ಗಡಿಭಾಗದ ನಾಗಪ್ಪನಹಳ್ಳಿ ಗೇಟ್, ಜಾಜೂರು, ಬೋಗೇಳರಹಟ್ಟಿ ಚೆಕ್‍ಪೋಸ್ಟ್‌ಗೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಗಡಿಭಾಗದ ಕಣಕುಪ್ಪೆ ಕ್ರಾಸ್, ಎದ್ದಲಬೊಮ್ಮನಹಟ್ಟಿ, ಉಡೇವು, ಮಲ್ಲಾಸಮುದ್ರ, ಭೀಮಾಗೊಂಡನಹಳ್ಳಿಯ ಚೆಕ್‍ಪೋಸ್ಟ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಚುನಾವಣೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿವಿಧೆಡೆ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಈ ಚೆಕ್‍ಪೋಸ್ಟ್‌ಗಳಲ್ಲಿನ ಅಧಿಕಾರಿ, ಸಿಬ್ಬಂದಿಯ ಹಾಜರಾತಿ, ಕಾರ್ಯವೈಖರಿ, ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಚೆಕ್‍ಪೋಸ್ಟ್‌ಗಳಲ್ಲಿನ ಮೂಲಸೌಕರ್ಯದ ಬಗ್ಗೆ ಮಾಹಿತಿ ಪಡೆದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಚೆಕ್‍ಪೋಸ್ಟ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಚೆಕ್‍ಪೋಸ್ಟ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅವರು ಅಧಿಕಾರಿಗಳೊಂದಿಗೆ ತೆರಳಿ, ಕಾರು, ಬಸ್ಸು, ಟ್ರಕ್ ಸೇರಿದಂತೆ ವಿವಿಧ ವಾಹನಗಳನ್ನೂ ತಪಾಸಣೆ ಮಾಡಿದರು. ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಚುನಾವಣೆ ಕುರಿತು ತಿಳಿವಳಿಕೆ ಹೇಳಿ, ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ಮಾತನಾಡಬೇಕು ಎಂದು ಚೆಕ್‍ಪೋಸ್ಟ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಲಹೆ ನೀಡಿದ ಅವರು, ವಾಹನ ತಪಾಸಣೆಯ ನಂತರ ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತಚಲಾಯಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣಪ್ಪ, ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.

ಚೆಕ್‍ಪೋಸ್ಟ್‌ಗೆ ಸಹಾಯಕ ಚುನಾವಣಾಧಿಕಾರಿ ಭೇಟಿ

ಚಿತ್ರದುರ್ಗ: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ವಿವಿಧ ಚೆಕ್‍ಪೋಸ್ಟ್‌ಗಳಿಗೆ ಭಾನುವಾರ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ರಸ್ತೆಯ ಕೆಳಗಳಹಟ್ಟಿ, ತುರವನೂರು ರಸ್ತೆ ಸೇರಿದಂತೆ ಇತರೆ ಸ್ಥಳಗಳಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‌ಗಳಿಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅವರು ಭೇಟಿ ನೀಡಿ, ಖುದ್ದು ವಾಹನಗಳ ತಪಾಸಣೆ ನಡೆಸಿದರು.