ಉಪ್ಪಿನಂಗಡಿ : ಮಂಗಳೂರಿನ ಕೆಪಿಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿ ಪರಮೇಶ್ವರ ಗೌಡ ಅವರ ಪುತ್ರ, ಸಿಐಎಸ್‌ಎಫ್ ಯೋಧ ಸೀತಾರಾಮ ಗೌಡ (೫೦) ಬುಧವಾರ ಮೃತಪಟ್ಟಿದ್ದು, ಗುರುವಾರ ಸಂಜೆ ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಿತು.

ಸೀತಾರಾಮ ಗೌಡ ಸಿಐಎಸ್‌ಎಫ್‌ನಲ್ಲಿ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಜು.೩ರಂದು ರಜೆಯ ಮೇಲೆ ಊರಿಗೆ ಬಂದವರು ಮಂಗಳೂರಿನಲ್ಲಿನ ಮನೆಯಲ್ಲಿ ವಾಸ್ತವ್ಯವಿದ್ದರು. ಜು.೭ರಂದು ಎಸ್‌ಐಆರ್ ದಾಖಲಾತಿ ನೀಡಲು ಕೊಯಿಲದ ಮನೆಗೆ ಬಂದವರು ಜು.೮ರಂದು ಮಧ್ಯಾಹ್ನ ಕೊಯಿಲದಿಂದ ಮಂಗಳೂರಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ರಾಷ್ಡ್ರೀಯ ಹೆದ್ದಾರಿ ೬೬ರ ಕೆಪಿಟಿ ಬಳಿ ರಸ್ತೆ ಅಪಘಾತವಾಗಿತ್ತು. ಗಂಭೀರ ಗಾಯಗೊಂಡಿದ್ದ ಸೀತಾರಾಮ ಗೌಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರ ಪತ್ನಿ ರೋಹಿಣಿ ಅವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸೀತಾರಾಮ ಗೌಡ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಅಂತಿಮ ದರ್ಶನ, ಅಂತ್ಯ ಸಂಸ್ಕಾರ:

ಮಂಗಳೂರಿನಲ್ಲಿ ಮರಣೊತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಹುಟ್ಟೂರಿಗೆ ಕರೆತರಲಾಯಿತು. ಮನೆಯಲ್ಲಿ ಸಿಐಎಸ್‌ಎಫ್ ಬೆಟಾಲಿಯನ್ ನಿಂದ ಗೌರವ ವಂದನೆ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಕಡಬ ತಾಲೂಕು ಆಡಳಿತ ಸೌಧದ ಉಪತಹಸೀಲ್ದಾರ್‌ ಸಯ್ಯದುಲ್ಲಾ ಖಾನ್, ಕೊಯಿಲ ಗ್ರಾಪಂ ಪಿಡಿಓ ಸಂದೇಶ್, ಸೇರಿದಂತೆ ನಿವೃತ್ತ ಯೋಧರಿಂದ ಜನಪ್ರತಿನಿಧಿಗಳು, ವಿವಿಧ ಸಂಸ್ಥೆಗಳ ಮುಖಂಡರು, ಊರಿನ ಪ್ರಮುಖರು ಅಂತಿಮ ನಮನ ಸಲ್ಲಿಸಿದರು. ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಗೋಕುಲನಗರ ಎಂಬಲ್ಲಿಂದ ಮೃತದೇಹ ಹೊತ್ತ ಅಂಬ್ಯಲೆನ್ಸ್ ಹಿಂದೆ ನೂರಾರು ವಾಹನದಲ್ಲಿ ಗ್ರಾಮಸ್ಥರು ಸಾಲುಗಟ್ಟಿ ಜೊತೆಯಲ್ಲಿ ಪುತ್ಯೆ ತನಕ ಸಾಗಿದರು.