ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾಂಡೀಸ್(ಅರಶಿನ ಕಾಮಾಲೆ, ಹಳದಿ ರೋಗ) ಮತ್ತು ಡೆಂಘೀ ರೋಗಗಳು ನಿಯಂತ್ರಣದಲ್ಲಿದ್ದು, ಆದರೂ ಸಾರ್ವಜನಿಕರು ಜಾಗೃತಿ ಹಾಗೂ ರೋಗ ನಿಯಂತ್ರಣಕ್ಕೆ ಸ್ವಯಂ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾಂಡೀಸ್(ಅರಶಿನ ಕಾಮಾಲೆ, ಹಳದಿ ರೋಗ) ಮತ್ತು ಡೆಂಘೀ ರೋಗಗಳು ನಿಯಂತ್ರಣದಲ್ಲಿದ್ದು, ಆದರೂ ಸಾರ್ವಜನಿಕರು ಜಾಗೃತಿ ಹಾಗೂ ರೋಗ ನಿಯಂತ್ರಣಕ್ಕೆ ಸ್ವಯಂ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುರಕ್ಷಿತ ಕುಡಿಯುವ ನೀರು ಉತ್ತಮ ನೈರ್ಮಲ್ಯ, ವೈಯಕ್ತಿಕ ಸ್ವಚ್ಛತೆ, ವಿಶೇಷವಾಗಿ ಕೈತೊಳೆಯುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ಪಾಲಿಸುವುದರ ಮೂಲಕ ಈ ಎರಡೂ ವಿಧದ ಸೋಂಕುಗಳನ್ನು ತಡೆಗಟ್ಟಬಹುದು. ಡೋಂಗರಕೆರೆ, ಅಳಕೆ, ಕುದ್ರೋಳಿ ಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯಕರ್ತರ ಮೂಲಕ ರೋಗ ನಿಯಂತ್ರಿಸಲು ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಬಾವಿ ನೀರಿನ ಕ್ಲೋರಿನೇಶನ್ ಮಾಡಲಾಗುತ್ತಿದೆ ಎಂದರು.2025ರಲ್ಲಿ ಜಿಲ್ಲೆಯಲ್ಲಿ ಹೆಪಟೈಟಿಸ್ ಎ ಮತ್ತು ಇ 103 ಪ್ರಕರಣಗಳು ಪತ್ತೆಯಾಗಿದೆ. 2025ರ ಜನವರಿಯಿಂದ ಜೂನ್‌ವರೆಗೆ ಹೆಪಟೈಟಿಸ್ ಎ ಮತ್ತು ಇ ಒಟ್ಟು 23 ಪತ್ತೆಯಾಗಿದ್ದು, 2026ರ ಜನವರಿಯಿಂದ ಜೂನ್‌ವರೆಗೆ 35 ಪ್ರಕರಣ ಪತ್ತೆಯಾಗಿದೆ (ಮಂಗಳೂರಿನಲ್ಲಿ 24, ಬಂಟ್ವಾಳದಲ್ಲಿ 4, ಬೆಳ್ತಂಗಡಿಯಲ್ಲಿ 1, ಪುತ್ತೂರಿನಲ್ಲಿ 6 ಪ್ರಕರಣ) ಎಂದರು.
27 ಡೆಂಘೀ ಪ್ರಕರಣ ಪತ್ತೆ:ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದಲ್ಲಿದೆ. ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷಿಸಿದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳೂ ಇರುತ್ತದೆ. ಸ್ವಯಂ ಚಿಕಿತ್ಸೆ ಅಥವಾ ಮನೆಮದ್ದು ಅಪಾಯಕಾರಿಯಾಗಬಹುದು ಎಂದರು.
ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಅತ್ಯಂತ ಸಣ್ಣ ಚಮಚ ಗಾತ್ರದ ಮುಚ್ಚಳಗಳಿಂದ ಹಿಡಿದು ದೊಡ್ಡ ಗಾತ್ರದ ತೆರೆದ ನೀರಿನ ಸಂಗ್ರಹಣೆಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿದ್ದು, ಇದನ್ನು ನಾಶ ಪಡಿಸಬೇಕು. 2025ರಲ್ಲಿ ಜನವರಿಯಿಂದ ಜೂನ್‌ವರೆಗೆ ಒಟ್ಟು 80 ಡೆಂಘೀ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ. 2026ರಲ್ಲಿ 27 (ಮನಪಾ ವ್ಯಾಪ್ತಿ 9, ಮಂಗಳೂರು ತಾಲೂಕು 3, ಬಂಟ್ವಾಳ 7, ಬೆಳ್ತಂಗಡಿ 8) ಪ್ರಕರಣ ಪತ್ತೆಯಾಗಿದೆ ಎಂದರು. ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ನವೀನ್ ಇದ್ದರು.5 ಪಿಎಚ್‌ಸಿಗಳಲ್ಲಿ ವೈದ್ಯರ ಹುದ್ದೆ ಖಾಲಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಶಿರ್ತಾಡಿ, ಬೆಳ್ತಂಗಡಿ ತಾಲೂಕಿನ ನಾರಾವಿ, ಪುತ್ತೂರು ತಾಲೂಕಿನ ಈಶ್ವರಮಂಗಲ, ಬಂಟ್ವಾಳ ತಾಲೂಕಿನ ಮಾಣಿ, ಬೆಳ್ತಂಗಡಿ ತಾಲೂಕಿನ ಅತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಿದ್ದು, ಗುತ್ತಿಗೆ ಆಧಾರದ ನೇಮಕಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಉಪ್ಪಿನಂಗಡಿ, ಕಡಬ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಹಿರಿಯ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ ಎಂದು ಡಾ.ತಿಮ್ಮಯ್ಯ ತಿಳಿಸಿದರು.