ಸಾರಾಂಶ
ಸವಿತಾ ಸಮಾಜ ಸಂಘದ ಪ್ರತ್ಯೇಕ ಬಣಗಳಿಂದ ಕಾರ್ಯಕ್ರಮ । 2 ಗುಂಪುಗಳ ಸದಸ್ಯರ ನಡುವೆ ವಾಗ್ವಾದ
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಸವಿತಾ ಸಮಾಜ ಸಂಘದೊಳಗೆ ನಡೆಯುತ್ತಿರುವ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು ಶುಕ್ರವಾರ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ನಡೆಯುವ ವೇಳೆ ಎರಡು ಬಣಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ
ಪಟ್ಟಣದ ಸವಿತಾ ಸಮಾಜ ಸಂಘದಲ್ಲಿ ಈಗಾಗಲೇ ಎರಡು ಬಣಗಳಾಗಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಮಹರ್ಷಿ ವಾಲ್ಮೀಕಿ ದಿನಾಚರಣೆ ಅಂಗವಾಗಿ ಪ್ರತ್ಯೇಕವಾಗಿ ಎರಡು ಬಣದ ಸಂಘದ ಸದಸ್ಯರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಸವಿತಾ ಸಮಾಜ ಸಂಘದ ಅಧ್ಯಕ್ಷ ಪ್ರಕಾಶ ಅವರು ಇನ್ನೊಂದು ಬಣದ ಮಾಜಿ ಅಧ್ಯಕ್ಷ ನರಸಿಂಹಸ್ವಾಮಿ ಅವರು ನಡೆಸುತ್ತಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ತಮ್ಮ ತಂಡದ ಸದಸ್ಯರ ತಂಡದೊಂದಿಗೆ ಆಗಮಿಸಿ ಅಧಿಕೃತ ಸಂಘದೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ರೀತಿ ಪ್ರತ್ಯೇಕ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಈ ಸಂದರ್ಭ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ‘ಈ ಹಿಂದೆ ಕಳೆದ ಆರು ವರ್ಷಗಳ ಹಿಂದೆ ಸವಿತಾ ಸಮಾಜದ ಗುರುಹಿರಿಯರ ಮಾರ್ಗದರ್ಶನದಲ್ಲಿ ಸವಿತಾ ಸಮಾಜದ ಸಂಘ ಸ್ಥಾಪಿಸಲಾಗಿತ್ತು. ಅ ಸಂದರ್ಭ ಸವಿತಾ ಸಮಾಜದ ಅಧ್ಯಕ್ಷರಾಗಿದ್ದ ನರಸಿಂಹಸ್ವಾಮಿ ಸಂಘದ ಹೆಸರನ್ನು ದುರುಪಯೋಗ ಮಾಡಿಕೊಂಡು ಸಂಘದಲ್ಲಿ ಹಣ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸಮಾಜವನ್ನು ಒಡೆಯುವಂತ ಪಿತೂರಿ ನಡೆಸಿದ ಹಿನ್ನೆಲೆ ಅವಿಶ್ವಾಸ ಗೊತ್ತುವಳಿ ಮಂಡಿಸಿ ನರಸಿಂಹಸ್ವಾಮಿಯನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ನಂತರ ಸವಿತಾ ಸಮಾಜದ ಎಲ್ಲಾ ಸದಸ್ಯರ ನಿರ್ಣಯದಂತೆ ನನ್ನನ್ನು ಕಳೆದ ಒಂದು ವರ್ಷದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಅದರಂತೆ ನಾನು ಸಂಘದ ಧ್ಯೇಯೋದ್ದೇಶಗಳ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದನ್ನು ಸಹಿಸದ ನರಸಿಂಹಸ್ವಾಮಿ ನಾನು ಸವಿತಾ ಸಮಾಜದ ಅಧ್ಯಕ್ಷ ಎಂದು ಸುಳ್ಳು ಹೇಳಿಕೊಂಡು ಸವಿತಾ ಸಮಾಜದ ಮೂರು ನಾಲ್ಕು ಜನರ ಪ್ರತ್ಯೇಕ ಗುಂಪು ಮಾಡಿಕೊಂಡು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ನರಸಿಂಹ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ನೀಡಲು ಸಂಘದ ಸರ್ವ ಸದಸ್ಯರು ಮುಂದಾಗುತ್ತೇವೆ’ ಎಂದು ಹೇಳಿದರು.
ಮಾಜಿ ಅಧ್ಯಕ್ಷ ನರಸಿಂಹ ಸ್ವಾಮಿ ಮಾತನಾಡಿ, ‘ಇಂದು ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮ ಇದ್ದ ಕಾರಣ ಎಂದಿನಂತೆ ನಮ್ಮ ಕಚೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಅದರಂತೆ ನಾನು ಸಹ ಕಳೆದ ನಾಲ್ಕು ವರ್ಷದಿಂದ ನಮ್ಮ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪೂಜ್ಯರ ಆಶೀರ್ವಾದದಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ಸಂಘದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿದ್ದೇನೆ. ಇದರ ಏಳಿಗೆ ಸಹಿಸದ ಕೆಲವರು ಗುಂಪು ಕಟ್ಟಿಕೊಂಡು ಇಂದು ಏಕಾಏಕಿ ನಮ್ಮ ಕಚೇರಿ ಒಳಗ ನುಗ್ಗಿ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದಲ್ಲದೆ ಕಚೇರಿಯ ನಾಮಫಲಕ ಕಿತ್ತು ಹಾಕಿದ್ದಾರೆ. ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ’ ಎಂದರು.ಇದೇ ವೇಳೆ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ಮಾಜಿ ಸಚಿವ ಬಿ ಶಿವರಾಂ ಅವರು ಎರಡು ಗುಂಪು ನಡುವೆ ಘರ್ಷಣೆ ಕಂಡು ಕಾರ್ಯಕ್ರಮ ಉದ್ಘಾಟಿಸದೆ ಹೊರ ನಡೆದರು.
ಈ ಸಂದರ್ಭ ಸವಿತಾ ಸಮಾಜದ ಮಹಿಳಾ ಜಿಲ್ಲಾಧ್ಯಕ್ಷೆ ಪುಷ್ಪಲತಾ. ಜಯರಾಮ್. ಅನಿಲ್. ರಘು. ಮೋಹನ್ ಕುಮಾರ್ ಹಾಜರಿದ್ದರು.ಇದೇ ಸಂದರ್ಭ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಘರ್ಷಣೆಯ ಚಿತ್ರಣವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಸವಿತಾ ಸಮಾಜದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ಕಚೇರಿಯ ನಾಮಫಲಕ ಕಿತ್ತು ಹಾಕಲಾಯಿತು.