ಸಾರಾಂಶ
ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸಂತ ಸೇವಾಲಾಲ್ ಜಯಂತಿ ನಡೆಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಸಮಾನತೆ ಬದುಕಿಗೆ ಹೆಚ್ಚು ಮಹತ್ವ ಕೊಟ್ಟು, ಬಂಜಾರಾ ಸಮುದಾಯದ ಉನ್ನತಿಗೆ ಹೋರಾಡಿದ ಮಹಾನ್ ಸಂತ ಸೇವಾಲಾಲ್ ಮಹಾರಾಜರು, ಅವರ ತತ್ವಾದರ್ಶ ಜೀವನ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿದರು.
ಲಂಬಾಣಿಗರಲ್ಲಿ ಸೇವಾಲಾಲ್ ಮಹಾರಾಜರು ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು, ತಮ್ಮ ಜನಾಂಗದ ಸೇವೆ ಮಾಡಿದ ಮಹಾನ್ ಹಿತಚಿಂತಕರು ಎಂದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ರೇಖು ಚವ್ಹಾಣ ಮಾತನಾಡಿ, ಹರಪ್ಪ ನಾಗರಿಕತೆಯನ್ನೇ ಹೋಲುವ ನಾಗರಿಕತೆ ಬಂಜಾರಾ ಸಮುದಾಯದ್ದು. ಸೇವಾಲಾಲ್ ಅವರು ಭಜನೆ ಮೂಲಕ ಸಮಾಜದಲ್ಲಿದ್ದ ತೊಡಕು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪವಾಡ ಪುರುಷರಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಗುರುವಾಗಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಕಂದಾಯ ಇಲಾಖೆ ಶಿರಸ್ತೇದಾರ ಚಂದ್ರಕಾಂತ್ ಮೇತ್ರೆ, ಜಿಪಂ ಮಾಜಿ ಸದಸ್ಯ ಕಿಶನ್ ರಾಠೋಡ, ಲಂಬಾಣಿ ಸಮಾಜದ ಮುಖಂಡರಾದ ಶಿವರಾಮ ಚವ್ಹಾಣ, ಮಾನಸಿಂಗ್ ಚವ್ಹಾಣ, ರವಿ ಚವ್ಹಾಣ, ಭಾಗಣ್ಣ ಚವ್ಹಾಣ, ನ್ಯಾಯವಾದಿ ಚಂದ್ರಶೇಖರ್ ಜಾಧವ, ಗ್ರಾಮ ಆಡಳಿತ ಅಧಿಕಾರಿ ರಮೇಶ, ನವಾಜ್ ಸೇರಿ ಇತರರಿದ್ದರು.