ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರೂ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಸದನದಲ್ಲಿ ಮುಖ್ಯಮಂತ್ರಿ ಶ್ರೀನಿವಾಸ ಪೂಜಾರಿ ಅವರ ಹೆಸರು ಹೇಳಿದ್ದಾರೆ, ಸುಮ್ಮನೆ ರಾಜಕೀಯಕ್ಕಾಗಿ ಆರೋಪ ಮಾಡುವ ಜಾಯಮಾನದವರು ಸಿದ್ದರಾಮಯ್ಯ ಅಲ್ಲ, ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ, 15 ಬಾರಿ ಬಜೆಟ್ ಮಂಡಿಸಿದ್ದಾರೆ, ಅವರು ಪಕ್ಕಾ ಮಾಹಿತಿ ಇದ್ದರೆ ಮಾತ್ರ ಆರೋಪ ಮಾಡುತ್ತಾರೆ ಎಂದರು.
ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಉತ್ತರ ಕೊಡುವಂತೆ ಕೋಟ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ಸಿದ್ದರಾಮಯ್ಯ ತಕ್ಕ ಉತ್ತರ ಕೊಡುತ್ತಾರೆ ಎಂದರು.ಮಳೆ ಪರಿಹಾರ ಸ್ಪಷ್ಟತೆ ಇಲ್ಲ:ರಾಜ್ಯದಲ್ಲಿ ಮಳೆಯಿಂದ ಮಳೆ ಕಳೆದುಕೊಂಡವರಿಗೆ ನೀಡುವ ಪರಿಹಾರ ಮೊತ್ತದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಒಪ್ಪಿಕೊಂಡ ಸಚಿವೆ, ಹಿಂದಿನ ಸರ್ಕಾರ 5 ಲಕ್ಷ ರು. ನೀಡುತಿತ್ತು, ಈಗ 1.20 ರು. ಪರಿಹಾರ ನೀಡಲಾಗುತ್ತಿದೆ ಎಂಬ ಬಗ್ಗೆ ತಮಗೆ ಸ್ಪಷ್ಟತೆ ಇಲ್ಲ. ಕಳೆದ ವರ್ಷ ಮಳೆಯಿಂದ ಮನೆ ಕಳಕೊಂಡವರಿಗೆ 5 ಲಕ್ಷ ರು. ಕೊಟ್ಟಿದ್ದೇವೆ. ಈ ಬಾರಿ ಎಷ್ಟು ಕೊಡಲಾಗುತ್ತಿದೆ ಎಂದು ತಿಳಿದಿಲ್ಲ, ಈ ಬಗ್ಗೆ ನಾನು ಗೊಂದಲ ಸೃಷ್ಟಿಸುವುದಿಲ್ಲ. ಮಳೆ ಆರಂಭವಾಗಿ ಎಷ್ಟು ದಿನ ಆಯ್ತು, ಆದಷ್ಟು ಬೇಗ ಸರ್ಕಾರಿ ಮಟ್ಟದಲ್ಲಿ ತಿಳಿದುಕೊಂಡು ಹೇಳುತ್ತೇನೆ ಎಂದರು.
ಬಿಜೆಪಿಯವ್ರು ಏನೇನೋ ಹೇಳ್ತಾರೆ:ಈ ಬಗ್ಗೆ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಅವರಿಗೆ ಉತ್ತರ ಕೊಡಲು ನಾವು ಸಮರ್ಥರಿದ್ದೇವೆ. ಸಿದ್ದರಾಮಯ್ಯನವರು ಸಮರ್ಥರಿದ್ದಾರೆ, ಬಿಜೆಪಿಯವರು ಹತಾಶರಾಗಿದ್ದಾರೆ ಹಾಗಾಗಿ ಏನೇನೋ ಹೇಳುತ್ತಾರೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷದ ಕಡಲು ಕೊರೆತ ತಡೆಯಲು ಮಾಡಿಕ ಕಾಮಗಾರಿಗಳ 5 ಕೋಟಿ ರು. ಬಿಡುಗಡೆ ಆಗದ ಬಗ್ಗೆ ಉತ್ತರಿಸಿದ ಸಚಿವೆ, ಹಳೆಬಾಕಿ ಪಾವತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ತಕ್ಷಣ 5 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇವೆ, ಆ ಮೊತ್ತ ಬೇಗ ಬರುತ್ತದೆ ಎಂದರು.ಹಟ್ಟಿಯಂಗಡಿ ದೇವಳಕ್ಕೆ ಭೇಟಿ: ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸತ್ಕರಿಸಲಾಯಿತು.