ಕಾಳಜಿ ಕೇಂದ್ರ ಎಂದು ಬೋರ್ಡ್ ಹಾಕಿಕೊಂಡರೆ ಯಾರು ಬರುವುದಿಲ್ಲ

| Published : Jul 22 2024, 01:21 AM IST

ಕಾಳಜಿ ಕೇಂದ್ರ ಎಂದು ಬೋರ್ಡ್ ಹಾಕಿಕೊಂಡರೆ ಯಾರು ಬರುವುದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರಿಗಾಗಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ, ಅದನ್ನು ವೀಕ್ಷಿಸಲು ಬಂದಾಗ ಇಲ್ಲಿ ಚಾಪೆ ಇಲ್ಲ, ದಿಂಬಿಲ್ಲ, ರಗ್ಗಿಲ್ಲ, ನೀರಿಗೆ ಒಂದು ಲೋಟವಿಲ್ಲ, ಈಗಿದ್ದಾಗ ಕಾಳಜಿ ಕೇಂದ್ರ ಎಂದು ಹೇಗೆ ಹೇಳುವುದು, ಇಲ್ಲಿನ ಸಿಬ್ಬಂದಿಗಳು ಕೊಠಡಿಯನ್ನು ತೆರದರೆ ಮಾತ್ರ ಕಾಳಜಿ ಕೇಂದ್ರ ಎಂದು ಅಂದು ಕೊಂಡಿದ್ದೀರಾ..?

ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ

ಕಾಳಜಿ ಕೇಂದ್ರ ಎಂದು ಬೋರ್ಡ್ ಹಾಕಿಕೊಂಡರೆ ಯಾರು ಬರುವುದಿಲ್ಲ, ಅಲ್ಲಿ ತಯಾರಿ ಮಾಡಿಕೊಂಡಾಗ ಮಾತ್ರ ನಿರಾಶ್ರಿತರು ಬರಲು ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಮದಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರಿಗಾಗಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ, ಅದನ್ನು ವೀಕ್ಷಿಸಲು ಬಂದಾಗ ಇಲ್ಲಿ ಚಾಪೆ ಇಲ್ಲ, ದಿಂಬಿಲ್ಲ, ರಗ್ಗಿಲ್ಲ, ನೀರಿಗೆ ಒಂದು ಲೋಟವಿಲ್ಲ, ಈಗಿದ್ದಾಗ ಕಾಳಜಿ ಕೇಂದ್ರ ಎಂದು ಹೇಗೆ ಹೇಳುವುದು, ಇಲ್ಲಿನ ಸಿಬ್ಬಂದಿಗಳು ಕೊಠಡಿಯನ್ನು ತೆರದರೆ ಮಾತ್ರ ಕಾಳಜಿ ಕೇಂದ್ರ ಎಂದು ಅಂದು ಕೊಂಡಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇನ್ನೆರಡು ದಿನಗಳಲ್ಲಿ ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು, ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಗ್ರಾಮಸ್ಥರಿಂದ ಅಹವಾಲು ಸ್ವೀಕಾರ:

ಆರೋಗ್ಯ ಇಲಾಖೆಯು ನಮಗೆ ಯಾವುದೇ ರೀತಿ ಸ್ಪಂಧಿಸುತ್ತಿಲ್ಲ, ಪಡಿತರ ಆಹಾರ ಪದಾರ್ಥಗಳನ್ನು ಬಂದಿದ್ದರೂ ನೀಡುತ್ತಿಲ್ಲ, ತಿಂಗಳ ಕೊನೆಯ ಮೂರು ದಿನದಲ್ಲಿ ಮಾತ್ರ ಆಹಾರ ಪದಾರ್ಥವನ್ನು ನೀಡುತ್ತಿದ್ದು, ಅಲ್ಲಿಯವರೆಗೂ ನಾವು ಕಾಯಬೇಕು, ಗ್ರಾಪಂ ಆಡಳಿತ ನಮಗೆ ಸ್ಪಂದಿಸುತ್ತಿಲ್ಲ, ವಿದ್ಯುತ್ ಸಮಸ್ಯೆ ಇರುವುದರಿಂದ ನಮಗೆ ಸೀಮೆಎಣ್ಣೆ ನೀಡಬೇಕು ಎಂಬಿತ್ಯಾಧಿ ಸಮಸ್ಯೆಗಳ ಬಗ್ಗೆ ಆದಿವಾಸಿಗಳು ಶಾಸಕರ ಗಮನಕ್ಕೆ ತಂದರು.

ಮನವಿ ಸ್ವೀಕರಿಸಿದ ನಂತರ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಗ್ರಾಮದಲ್ಲಿ ಶೇ. 60ರಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ, ಇನ್ನುಳಿದ ಅಭಿವೃದ್ಧಿ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು, ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಅಲ್ಲದೇ ಈ ಭಾಗದಲ್ಲಿ ಹಕ್ಕುಪತ್ರ ವಿತರಣೆ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಅದರ ಬಗ್ಗೆಯೂ ಸಹ ಗಮನಹರಿಸುತ್ತೇನೆ ಎಂದರು.

ಇದೇ ವೇಳೆ ಮಳೆಗೆ ಮುಳುಗಡೆಯಾಗಿದ್ದ ಮನೆಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ತಹಸೀಲ್ದಾರ್ ಶ್ರೀನಿವಾಸ್, ಇಓ ಧರಣೇಶ್, ಎಸಿಎಫ್ ರಂಗಸ್ವಾಮಿ, ಆರ್. ಎಫ್.ಓ. ಮಧು, ನೀರಾವರಿ ಅಧಿಕಾರಿ ಇಇ ಚಂದ್ರಶೇಖರ್, ಎಇಇ ಗಣೇಶ್, ಗೋವಿಂದನಾಯಕ, ಬೋರೆಗೌಡ, ಚಂದುಕುಮಾರ್, ಜಯರಾಮ್, ಮಂಜುನಾಥ್, ಶ್ರೀಧರ್, ಮಹೇಶ್, ಮಂಜುನಾಥ್, ಎಸ್.ಐ. ಚಂದ್ರಹಾಸ, ಗೌಸ್, ಗ್ರಾಪಂ ಅಧ್ಯಕ್ಷ ಸುಬ್ರಮಣಿ, ಸದಸ್ಯರಾದ ವೇಂಕಟೆಗೌಡ, ಪುರುಷೋತ್ತಮ್, ಮುಖಂಡರಾದ ಸತೀಶ್ ಗೌಡ, ಎಚ್.ಸಿ. ನರಸಿಂಹಮೂರ್ತಿ, ಮಧುಕುಮಾರ್, ತಿರುಪತಿ, ನಂದಿನಿ, ಅಬ್ದುಲ್ ಇದ್ದರು.