ಜ್ಞಾನ, ಸಂಪನ್ನತೆ ಮಾರ್ಗದತ್ತ ಒಯ್ಯುವ ಗುರು: ಬಿಕೆ ದಾನೇಶ್ವರಿ

| Published : Jul 22 2024, 01:21 AM IST

ಜ್ಞಾನ, ಸಂಪನ್ನತೆ ಮಾರ್ಗದತ್ತ ಒಯ್ಯುವ ಗುರು: ಬಿಕೆ ದಾನೇಶ್ವರಿ
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ಣತೆ, ಸಂಪನ್ನತೆ, ಸಂಪೂರ್ಣತೆಗೆ ಕೊಂಡೊಯ್ಯುವ ಗುರು ಸತ್ಯ ಜ್ಞಾನ, ಸತ್ಯಮಾರ್ಗ, ಸನ್ಮಾರ್ಗವನ್ನು ತೋರಿಸುತ್ತಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಹೇಳಿದರು. ಚಾಮರಾಜನಗರದಲ್ಲಿ ವ್ಯಾಸ ಪೂರ್ಣಿಮೆ ಅಂಗವಾಗಿ ಗೌರವ ಸ್ವೀಕರಿಸಿ ಮಾತನಾಡಿದರು.

ರಾಜಯೋಗಿನಿಗೆ ಫಲತಾಂಬೂಲ ಗೌರವ । ವ್ಯಾಸ ಪೂರ್ಣಿಮೆಗೆ ಋಗ್ವೇದಿ ಯೂತ್‌ ಕ್ಲಬ್‌ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪೂರ್ಣತೆ, ಸಂಪನ್ನತೆ, ಸಂಪೂರ್ಣತೆಗೆ ಕೊಂಡೊಯ್ಯುವ ಗುರು ಸತ್ಯ ಜ್ಞಾನ, ಸತ್ಯಮಾರ್ಗ, ಸನ್ಮಾರ್ಗವನ್ನು ತೋರಿಸುತ್ತಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ವ್ಯಾಸ ಪೂರ್ಣಿಮೆಯ ಅಂಗವಾಗಿ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಅವರಿಂದ ಫಲ ತಾಂಬೂಲ ಗೌರವ ಸ್ವೀಕರಿಸಿ ಮಾತನಾಡಿದರು.

ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಭಾರತೀಯ ಸನಾತನ ಧರ್ಮದ ಮುಖ್ಯ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಗುರು ಅಗತ್ಯ. ಗುರು ಜ್ಞಾನದ ಬೆಳಕು .ಮುಕ್ತಿಯ ಮಾರ್ಗದರ್ಶಕ. ಸನ್ಮಾರ್ಗದ ಶ್ರೇಷ್ಠತೆಯ ಮೂಲಕ ಶಿಷ್ಯ ವೃಂದಕ್ಕೆ ಆಧ್ಯಾತ್ಮಿಕ ಮೌಲ್ಯಗಳನ್ನ, ಆತ್ಮದ ಶಕ್ತಿಯನ್ನು, ಜೀವನದ ಸಂದೇಶಗಳನ್ನ ತಲುಪಿಸುವ ಗುರು ಮತ್ತು ಎಲ್ಲಾ ಸದ್ಗುರುಗಳಿಗೆ ನಮನಗಳನ್ನು ಸಲ್ಲಿಸುವ ದಿನವಾಗಿದೆ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಮಾತನಾಡಿ, ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆ ಆಗಿ ಆಚರಿಸಲಾಗುತ್ತದೆ. ಭಾರತೀಯ ಸನಾತನ ಧರ್ಮದಲ್ಲಿ ಬಹು ಮುಖ್ಯವಾದ ಕಾರ್ಯವಾಗಿದೆ ಎಂದರು.

ವ್ಯಾಸರು ಭಗವಂತನ ಅವತಾರವಾಗಿ ಭಾರತೀಯ ಸನಾತನ ಧರ್ಮದ ಸಾಹಿತ್ಯ ,ಸಂಸ್ಕೃತಿಯ, ಧರ್ಮದ ಮೌಲ್ಯಗಳಾದ ವೇದಗಳನ್ನು ವಿಭಜಿಸಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದಗಳನ್ನು ನೀಡಿ ಸಂಸ್ಕೃತಿಯ ದಿವ್ಯ ಸಂದೇಶಗಳನ್ನು ಅರ್ಥ ಮಾಡಿಸಿದ ಮಹಾನ್ ವ್ಯಕ್ತಿ ಹಾಗೂ ಶಕ್ತಿ ಎಂದು ತಿಳಿಸಿದರು.

ವ್ಯಾಸರ ಜನ್ಮದಿನವೇ ಗುರುಪೂರ್ಣಿಮೆಯಾಗಿದ್ದು, ಮಾನವ ಜನಾಂಗ ಸರ್ವ ರೀತಿಯಲ್ಲಿಯೂ ಸನ್ಮಾರ್ಗದಲ್ಲಿ ನಡೆಯಲು ಗುರುಗಳ ಅಗತ್ಯ ಹಾಗೂ ಮಾರ್ಗದರ್ಶನ, ಸಲಹೆ, ಶುಭ ಹಾರೈಕೆ ತುಂಬಾ ಅಗತ್ಯವಿದೆ . ಸರ್ವರನ್ನು ಗುರು ಭಕ್ತಿಯೊಂದೇ ಕಾಪಾಡುತ್ತದೆ ಎಂದರು.

ಗುರುಭಕ್ತಿಯನ್ನು ಸದಾ ಇಟ್ಟುಕೊಳ್ಳೋಣ. ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ. ಗುರುಗಳನ್ನು ಗೌರವಿಸಿ ಸಂತೋಷ ಪಡೋಣ ಎಂದು ತಿಳಿಸಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ರವರು ಹಲವು ದಶಕಗಳಿಂದ ಚಾಮರಾಜನಗರದಲ್ಲಿ ಜನತೆಗೆ ಸನ್ಮಾರ್ಗದ ದಿವ್ಯ ಸ್ಪೂರ್ತಿಯ ಸಂದೇಶಗಳನ್ನು ನೀಡಿ, ಶಾಂತಿಯ ಜೀವನವನ್ನ ನಡೆಸಲು ಗುರುವಾಗಿ ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಗೀತಕ್ಕ, ಬಿಕೆ ಆರಾಧ್ಯ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಎಸ್. ಋಗ್ವೇದಿ ಇದ್ದರು. ಫೋಟೋ: 21ಸಿಎಚ್ಎನ್‌51

ಚಾಮರಾಜನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ವ್ಯಾಸ ಪೂರ್ಣಿಮೆಯ ಅಂಗವಾಗಿ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ರಾಜಯೋಗಿನಿ ಬಿಕೆ ದಾನೇಶ್ವರಿ ರವರಿಗೆ ಫಲ ತಾಂಬೂಲಗಳನ್ನು ನೀಡಿ ಸುರೇಶ್ ಎನ್.ಋಗ್ವೇದಿ ಗೌರವಿಸಿದರು.