ಸಾರಾಂಶ
ಪುತ್ತೂರಿನ ಮುಕ್ರಂಪಾಡಿ ಎಂಬಲ್ಲಿ ಮಹೇಂದ್ರ ಶೋರೂಂನಲ್ಲಿ ಉದ್ಯೋಗಿಯಾಗಿದ್ದ ಸನ್ಮಿತ್ ಶನಿವಾರ ರಾತ್ರಿ ತನ್ನ ಸ್ಕೂಟರ್‌ನಲ್ಲಿ ಶೋರೂಂನಿಂದ ಮನೆಗೆ ಹೊರಟವರು ನಾಪತ್ತೆಯಾಗಿದ್ದರು.
ಪುತ್ತೂರು: ತಾಲೂಕಿನ ಸರ್ವೆ ಗ್ರಾಮದ ಗೌರಿ ಹೊಳೆಯ ಬಳಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕನ ಮೃತದೇಹವು ಭಾನುವಾರ ಸರ್ವೆ ಗ್ರಾಮದ ಗೌರಿ ಹೊಳೆಯಲ್ಲಿ ಪತ್ತೆಯಾಗಿದೆ. ಕಡಬ ತಾಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರಗೌಡ ಎಂಬವರ ಪುತ್ರ ಸನ್ಮಿತ್ (೨೧) ಮೃತ ಯುವಕ. ಪುತ್ತೂರಿನ ಮುಕ್ರಂಪಾಡಿ ಎಂಬಲ್ಲಿ ಮಹೇಂದ್ರ ಶೋರೂಂನಲ್ಲಿ ಉದ್ಯೋಗಿಯಾಗಿದ್ದ ಸನ್ಮಿತ್ ಶನಿವಾರ ರಾತ್ರಿ ತನ್ನ ಸ್ಕೂಟರ್‌ನಲ್ಲಿ ಶೋರೂಂನಿಂದ ಮನೆಗೆ ಹೊರಟವರು ನಾಪತ್ತೆಯಾಗಿದ್ದರು. ಇವರ ವಾಹನವು ಸರ್ವೆಯ ಗೌರಿ ಹೊಳೆಯ ಬದಿಯಿಂದ ಸುಮಾರು ೧೫೦ ಮೀಟರ್ ಬಳಿ ಪತ್ತೆಯಾಗಿತ್ತು. ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಚಂದ್ರ ಗೌಡರು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹೊಳೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ ರಾತ್ರಿ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಭಾನುವಾರ ಬೆಳಗ್ಗಿನಿಂದ ಶೋಧಕಾರ್ಯ ಮುಂದುವರಿಸಿದ್ದು, ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ.ಮಂಗಳೂರಲ್ಲಿ ಮತ್ತೆ ಕಳ್ಳರ ಗ್ಯಾಂಗ್ ಸಕ್ರಿಯ, ಕಳ್ಳತನಕ್ಕೆ ಯತ್ನಮಂಗಳೂರು: ಮಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ಕೃತ್ಯ ಮಾಸುವ ಮುನ್ನವೇ ಮಂಗಳೂರಿನ ಎರಡು ಕಡೆಗಳಲ್ಲಿ ಭಾನುವಾರ ನಸುಕಿನ ಜಾವ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಕಾವೂರಿನ ಮಹಾತ್ಮಾಗಾಂಧಿ ಬಡಾವಣೆಯಲ್ಲಿ ಬೆಳಗ್ಗಿನ ಜಾವ ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ ನಡೆಸಲಾಗಿದೆ. ನಸುಕಿನ 1.30ರಿಂದ 2 ಗಂಟೆ ಸಮಯ ಮನೆಯ ಕಡೆ ಬಂದ ನಾಲ್ವರ ತಂಡ ಗೇಟಿನ ಬೀಗ ಮುರಿದು ರಾಡಿನಿಂದ ಮನೆಯ ಮುಂಬಾಗಿಲ ಬೀಗ ಮುರಿಯಲು ಯತ್ನಿಸಿದೆ. ಆಗ ಮನೆ ಮಂದಿ ಎಚ್ಚರಗೊಂಡು ಬೊಬ್ಬೆ ಹಾಕಿದ್ದು ಕಳ್ಳರು ಓಡಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ. ಪದವಿನಂಗಡಿಯ ಪೆರ್ಲಗುರಿ ಎಂಬಲ್ಲಿ ಪ್ರಸನ್ನ ಗಣಪತಿ ದೇವಸ್ಥಾನ ಬಳಿ ನಸುಕಿನ 2ರಿಂದ 3 ಗಂಟೆ ಅವಧಿಯಲ್ಲಿ ಕಳ್ಳರ ತಂಡ ಕಳವಿಗೆ ಯತ್ನ ನಡೆಸಿದ ಬಗ್ಗೆ ಹೇಳಲಾಗಿದೆ. ದೇವಸ್ಥಾನ ಸಮೀಪದ ಮನೆಗಳತ್ತ ಟಾರ್ಚ್‌ಲೈಟ್ ಹಾಕುತ್ತಿದ್ದಾಗ ಮನೆ ಮಂದಿ ಎಚ್ಚರಗೊಂಡು ಹೊರಗೆ ಬಂದು ಕೂಗಿದ್ದಾರೆ. ಆಗ ಕಳ್ಳರು ಕಾಲ್ಕಿತ್ತಿದ್ದಾರೆ. ಕಳ್ಳರು ಪರಾರಿಯಾಗಿರುವುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಈ ಬಗ್ಗೆಯೂ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.