ಬಸವಸಾಗರಿದಿಂದ 1.50 ಲಕ್ಷ ಕ್ಯುಸೆಕ್ ನೀರು ಕೃಷ್ಣೆಗೆ

| Published : Jul 22 2024, 01:21 AM IST

ಬಸವಸಾಗರಿದಿಂದ 1.50 ಲಕ್ಷ ಕ್ಯುಸೆಕ್ ನೀರು ಕೃಷ್ಣೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡೇಕಲ್ ಸಮೀಪದ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನೀರನ್ನು ಭಾನುವಾರ ಕೃಷ್ಣಾ ನದಿಗೆ ಹರಿಬಿಡಲಾಯಿತು

ಕನ್ನಡಪ್ರಭ ವಾರ್ತೆ ಕೊಡೇಕಲ್

ಸಮೀಪದ ಬಸವಸಾಗರ ಜಲಾಶಯದಿಂದ ಭಾನುವಾರ 1.50 ಲಕ್ಷ ಕ್ಯುಸೆಕ್‌ ಪ್ರಮಾಣದಷ್ಟು ನೀರನ್ನು ಜಲಾಶಯದ 23 ಗೇಟುಗಳ ಮೂಲಕ ಕೃಷ್ಣಾ ನದಿಗೆ ಹರಿಬಿಡುತ್ತಿರುವುದರಿಂದ ನದಿ ತೀರದ ಗ್ರಾಮಗಳ ಜನತೆಗೆ ನೆರೆ ಭೀತಿ ಉಂಟಾಗಿದೆ.

ಬಸವಸಾಗರ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ದಿನದಿಂದ ದಿನಕ್ಕೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣದ ಜಾಸ್ತಿಯಾಗುತ್ತಿದೆ. ಭಾನುವಾರ ಜಲಾಶಯಕ್ಕೆ 1.25 ಲಕ್ಷ ಕ್ಯುಸೆಕ್ ಪ್ರಮಾಣದ ನೀರಿನ ಒಳಹರಿವು ಬರುತ್ತಿದ್ದು, ನದಿ ತೀರಕ್ಕೆ ಬಿಡುವ ನೀರಿನ ಪ್ರಮಾಣ ಸಹ ಅಧಿಕವಾಗಿದೆ.

ಕಳೆದ ವರ್ಷ ಬರದಿಂದಾಗಿ ಜಲಾಶಯದಲ್ಲಿ ನೀರಿಲ್ಲದೇ ಭಣಗುಡುವಂತಿತ್ತು. ಇದರಿಂದಾಗಿ ಮುಂಗಾರು ಬೆಳೆಗಳಿಗೂ ಸಹಿತ ವಾರಬಂದಿ ಪದ್ಧತಿ ಅನುಸರಿಸಲಾಗಿತ್ತು. 2023ರ ಜುಲೈ ತಿಂಗಳಲ್ಲಿ ಜಲಾಶಯದಲ್ಲಿ ಕೇವಲ 13ಟಿಎಂಸಿ ಮಾತ್ರ ನೀರಿನ ಸಂಗ್ರಹವಿತ್ತು.

ಆದರೆ ಇದೀಗ, ಜಲಾಶಯಕ್ಕೆ ಮತ್ತೆ ನೀರಿನ ಸಂಗ್ರವಿದ್ದು 33 ಗರಿಷ್ಠ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹಗೊಂಡಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ.

492.252 ಮೀ.ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 491.20 ಮೀ. ತಲುಪಿದ್ದು 28.65 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.ನದಿ ತೀರದ ಗ್ರಾಮಸ್ಥರಿಗೆ ಡಿಸಿ ಎಚ್ಚರಿಕೆ

ಯಾದಗಿರಿ: ಜು.21ರಂದು ಮಧ್ಯಾಹ್ನ 1.30 ಗಂಟೆಗೆ ಆಲಮಟ್ಟಿ ಆಣೆಕಟ್ಟಿನಿಂದ ಹೊರಹರಿವು ಮತ್ತು ಕೃಷ್ಣಾ ನದಿಯ ಜಲಾನಯನದ ಮೇಲ್ಭಾಗದ ಮಳೆಯನ್ನು ಪರಿಗಣಿಸಿ, ನಾರಾಯಣಪುರ ಆಣೆಕಟ್ಟಿನ ಒಳಹರಿವು ಸುಮಾರು 1.50 ಲಕ್ಷ ಕ್ಯುಸೆಕ್ ವರೆಗೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ತಿಳಿಸಿದ್ದಾರೆ.

ನಾರಾಯಣಪುರ ಆಣೆಕಟ್ಟಿನಿಂದ ಕೃಷ್ಣಾ ನದಿಗೆ ಬಿಡುವ ನೀರನ್ನು ಮಧ್ಯಾಹ್ನ 2ರಿಂದ 3ರ ವರೆಗೆ ಕ್ರಮೇಣ 1,60,000 ಕ್ಯುಸೆಕ್‌ಗೆ ಹೆಚ್ಚಿಸಲಾಗುವುದು ಮತ್ತು ಒಳಹರಿವಿನ ಆಧಾರದ ಮೇಲೆ ನದಿಗೆ ಬಿಡಲಾಗುವುದು ಅದಕ್ಕೆ ತಕ್ಕಂತೆ ಬದಲಾಗಿದೆ. ಸಂಬಂಧಿತರು ನಾರಾಯಣಪುರ ಆಣೆಕಟ್ಟಿನ ಕೆಳಭಾಗದ ನದಿ ತೀರದ ಹಳ್ಳಿಯ ಜನರನ್ನು ಎಚ್ಚರಿಸಲು ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.