ಅನ್ನಭಾಗ್ಯ ಅಕ್ರಮಕ್ಕೆ ಬ್ರೇಕ್‌

| Published : Sep 11 2025, 01:00 AM IST

ಸಾರಾಂಶ

ಕರ್ನಾಟಕದ ಬಡವರ ಪಾಲಿನ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆ ಜಾಲವು ವಿದೇಶಗಳಿಗೆ ರಫ್ತು ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮತ್ತೆ ಇಂಥ ಜಾಲ ತಲೆ ಎತ್ತದಂತೆ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

- ವಿದೇಶಕ್ಕೆ ಅನ್ನಭಾಗ್ಯ ಅಕ್ಕಿ ಕುರಿತ ಕನ್ನಡಪ್ರಭ ವರದಿ ಆಧರಿಸಿ ಕ್ರಮಕ್ಕೆ ಸಿಎಂ ಸೂಚನೆ- ವಾಹನಕ್ಕೆ ಜಿಪಿಎಸ್‌, ಗೋದಾಮಿಗೆ ಸಿಸಿಟೀವಿ, ತಪ್ಪಿತಸ್ಥರ ವಿರುದ್ಧವೂ ಕ್ರಮಕ್ಕೆ ಆದೇಶ

===

ಅನರ್ಹ ಬಿಪಿಎಲ್‌ ಕಾರ್ಡು ರದ್ದತಿಗೆ ಸೂಚನೆರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡು ರದ್ದುಪಡಿಸಿ. ನಿಜವಾದ ಬಡವರಿಗೆ ಮಾತ್ರ ಪಡಿತರ ಅಕ್ಕಿ ಸಿಗಬೇಕು. ಆದರೆ, ಅರ್ಹ ಒಂದೇ ಒಂದು ಕುಟುಂಬದ ಬಿಪಿಎಲ್‌ ಕಾರ್ಡೂ ರದ್ದಾಗದಂತೆ ಎಚ್ಚರ ವಹಿಸಬೇಕು. ಅರ್ಹರು ಹೆಸರು ಬಿಟ್ಟು ಹೋಗಿದ್ದರೆ ಅವರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

==

ಕನ್ನಡಪ್ರಭ ವರದಿ ಪರಿಣಾಮ

ಯಾದಗಿರಿಯ ಜಿಲ್ಲೆಯ ಅಕ್ಕಿಮಿಲ್‌ಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿವಿಧ ಬ್ರ್ಯಾಂಡ್‌ ಹೆಸರಲ್ಲಿ ಅಕ್ರಮವಾಗಿ ಫಾರಿನ್‌ಗೆ ಕಳುಹಿಸುವ ಕುರಿತು ಸೆ.8ರಂದು ‘ಕನ್ನಡಪ್ರಭ’ ಮಾತ್ರ ವರದಿ ಮಾಡಿತ್ತು.

==

ಯಾದಗಿರಿಯ ಗುರುಮಠಕಲ್‌ನ ಅಕ್ಕಿಮಿಲ್‌ಗಳಿಂದ ಅನ್ನಭಾಗ್ಯದ ಅಕ್ಕಿಗೆ ಪಾಲಿಶ್‌ ಮಾಡಿ ಫ್ರಾನ್ಸ್‌, ದುಬೈ, ಸಿಂಗಾಪುರಕ್ಕೆ ಮಾರಾಟ

ಸಿಂಗಾಪುರದಲ್ಲಿ 25 ಕೆಜಿಗೆ ₹8000, ದುಬೈನಲ್ಲಿ 10 ಕೆಜಿಗೆ ₹1500ಕ್ಕೆ ಮಾರಾಟ. ಬಡವರಿಗೆ ಸೇರಬೇಕಿದ್ದ ಅಕ್ಕಿ ಶ್ರೀಮಂತರ ಪಾಲು

ಈ ಬಗ್ಗೆ ಮಾಹಿತಿ ಪಡೆದು ಮಿಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ. 3985 ಕ್ವಿಂಟಾಲ್‌ ಅನ್ನಭಾಗ್ಯ ಅಕ್ಕಿ, 2 ಲಾರಿ ಜಪ್ತಿ

ಈ ಕುರಿತು ಬುಧವಾರ ನಡೆದ ಆಹಾರ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಪ್ರಸ್ತಾಪ. ದಂಧೆ ತಡೆಯಲು ಕಠಿಣ ಕ್ರಮಕ್ಕೆ ಸಿಎಂ ಆದೇಶ

==ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕದ ಬಡವರ ಪಾಲಿನ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆ ಜಾಲವು ವಿದೇಶಗಳಿಗೆ ರಫ್ತು ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮತ್ತೆ ಇಂಥ ಜಾಲ ತಲೆ ಎತ್ತದಂತೆ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ತಡೆಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್‌ಗಳನ್ನು ಅಳವಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿ ಅಗತ್ಯ ಇನ್ನಿತರೆ ಕ್ರಮ ಕೈಗೊಳ್ಳುವಂತೆ ಖಡಕ್‌ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಕನ್ನಡಪ್ರಭ’ದಲ್ಲಿ ಸೋಮವಾರ ಪ್ರಕಟವಾಗಿದ್ದ ‘ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ’ ಶೀರ್ಷಿಕೆಯ ವಿಶೇಷ ವರದಿ ಪ್ರತಿಯನ್ನು ಮುಖ್ಯಮಂತ್ರಿ ಅವರು ತಮ್ಮ ಟೇಬಲ್‌ ಮುಂದೆಯೇ ಇಟ್ಟುಕೊಂಡು ಇಲಾಖಾ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿದರು.

ಬಿಪಿಎಲ್‌ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಕಾಳಸಂತೆ ಜಾಲ ರಾಜ್ಯ, ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವುದು ಆಗಾಗ ಸುದ್ದಿಯಾಗುತ್ತಿದ್ದು, ನಮ್ಮ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದುದನ್ನು ನೋಡಿದ್ದೇವೆ. ಆದರೆ, ಈ ಜಾಲ ಇನ್ನಷ್ಟು ದೊಡ್ಡದಾಗಿ ಬೆಳೆದು ಅನ್ನಭಾಗ್ಯ ಅಕ್ಕಿಯನ್ನು ಫಾಲಿಶ್‌ ಮಾಡಿಸಿ ಸಿಂಗಾಪುರ, ದುಬೈ, ಫ್ರಾನ್ಸ್‌ ಸೇರಿ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂಥ ಜಾಲದ ಮೇಲೆ ದಾಳಿ ಮಾಡಿ ಅಧಿಕಾರಿಗಳು ಸಾವಿರಾರು ಟನ್‌ ಅಕ್ಕಿ ವಶಪಡಿಸಿಕೊಂಡಿರುವುದು ಉತ್ತಮ ಕೆಲಸ. ಇಂತಹ ಜಾಲ ಮತ್ತೆ ತಲೆ ಎತ್ತದಂತೆ ಸಂಪೂರ್ಣ ಮಟ್ಟ ಹಾಕಬೇಕು. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಅನರ್ಹ ಬಿಪಿಎಲ್‌ ಕಾರ್ಡು ರದ್ದತಿಗೆ ಸೂಚನೆ:

ಇನ್ನು ರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡುಗಳನ್ನು ಮುಲಾಜಿಲ್ಲದೆ ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಅರ್ಹರು ಅಂದರೆ ನಿಜವಾದ ಬಡವರಿಗೆ ಮಾತ್ರ ಪಡಿತರ ಅಕ್ಕಿ ಸಿಗಬೇಕು. ಆದರೆ, ಅರ್ಹ ಒಂದೇ ಒಂದು ಕುಟುಂಬದ ಬಿಪಿಎಲ್‌ ಕಾರ್ಡೂ ರದ್ದಾಗದಂತೆ ಎಚ್ಚರ ವಹಿಸಬೇಕು. ಅರ್ಹರು ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈಗಾಗಲೇ ಗುರುತಿಸಲಾಗಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ 3,65,614 ಪಡಿತರ ಚೀಟಿಗಳನ್ನು ರದ್ದು/ವರ್ಗ ಬದಲಾವಣೆ ಮಾಡಲಾಗಿದೆ. ಅನರ್ಹರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಇದೇ ವೇಳೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಕಿ ಜತೆ ಪೌಷ್ಟಿಕ ಧಾನ್ಯ ಒದಗಿಸಲು ಪರಿಶೀಲನೆ:

ಅನ್ನಭಾಗ್ಯ ಅಕ್ಕಿ ಜತೆಗೆ ಪೌಷ್ಟಿಕ ಧಾನ್ಯ, ಅಗತ್ಯ ಆಹಾರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಒದಗಿಸುವ ಕುರಿತು ಸಾಧಕ-ಬಾಧಕ ಪರಿಶೀಲಿಸಿ, ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಇದೇ ವೇಳೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಹೊಸ ನ್ಯಾಯ ಬೆಲೆ ಅಂಗಡಿಗಳನ್ನು ಆದ್ಯತೆ ಮೇಲೆ ನೀಡಲು ಕ್ರಮ ಕೈಗೊಳ್ಳಬೇಕು. ಕನಿಷ್ಠ ಬೆಂಬಲ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಆಹಾರಧಾನ್ಯಗಳ ಖರೀದಿ ಪ್ರಕ್ರಿಯೆ ನಡೆಸಬೇಕು ಎಂದು ಸಿಎಂ ಹೇಳಿದ್ದಾರೆ.

ಈ ನಡುವೆ, ಇದೇ ಪ್ರಥಮ ಬಾರಿಗೆ 0.29 ಲಕ್ಷ ಮೆಟ್ರಿಕ್ ಟನ್ ಕಿರು ಸಿರಿಧಾನ್ಯಗಳನ್ನು ಖರೀದಿಸಲಾಗುತ್ತಿದೆ ಎಂದ ಅವರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಖಾಲಿಯಿರುವ ಅಗತ್ಯ ಸಿಬ್ಬಂದಿ ನೇಮಕಾತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.