ರಾಂ ಅಜೆಕಾರು ಕಾರ್ಕಳಕನ್ನಡಪ್ರಭವಾರ್ತೆ ಕಾರ್ಕಳಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ (25ರಂದು) ಕಾರ್ಕಳಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿವೆ. ಧಾರ್ಮಿಕ, ಕೈಗಾರಿಕಾ, ಶೈಕ್ಷಣಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳ ಹಲವು ಸಮಸ್ಯೆಗಳ ಪರಿಹಾರಕ್ಕೆ ಈ ಭೇಟಿ ದಿಕ್ಕು ತೋರಿಸಬಹುದೆಂಬ ಆಶಾಭಾವನೆ ಜನರಲ್ಲಿ ಮೂಡಿದೆ.2027ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಕಾರ್ಕಳಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಗೋಮಟೇಶ್ವರ ಕ್ಷೇತ್ರದ ಸುತ್ತಮುತ್ತ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬೈಲೂರಿನ ಪರಶುರಾಮ ಮೂರ್ತಿ ವಿವಾದ ಇತ್ಯರ್ಥಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.


ಜವಳಿಪಾರ್ಕ್‌ ಕಾಮಗಾರಿ ಆರಂಭ ಆಗಿಲ್ಲ: ನಿಟ್ಟೆ ಬಳಿಯ ಜವಳಿ ಪಾರ್ಕ್ ಯೋಜನೆಗೆ ಶಂಕುಸ್ಥಾಪನೆ ನಡೆದಿದ್ದರೂ ಕಾಮಗಾರಿ ಆರಂಭವಾಗದಿರುವುದು ಯುವಕರಲ್ಲಿ ನಿರಾಶೆ ಮೂಡಿಸಿದೆ. ಉದ್ಯೋಗಾವಕಾಶ ಸೃಷ್ಟಿಸುವ ಮಹತ್ವಾಕಾಂಕ್ಷಿ ಯೋಜನೆ ಇನ್ನೂ ನೆಲೆಯೂರದಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಲಾಗಿದೆ.ಉಡುಪಿ ಜಿಲ್ಲೆಯ ಏಕೈಕ ಸರ್ಕಾರಿ ಬಿ.ಎಸ್‌.ಸಿ. ನರ್ಸಿಂಗ್ ಕಾಲೇಜು ಕಾರ್ಕಳದಲ್ಲಿದ್ದು, 2022ರ ಏಪ್ರಿಲ್‌ನಲ್ಲಿ ಪ್ರಾರಂಭವಾದ ಈ ಕಾಲೇಜಿನಲ್ಲಿ ಪ್ರಸ್ತುತ ನಾಲ್ಕು ಬ್ಯಾಚ್‌ಗಳಲ್ಲಿ ಒಟ್ಟು 160 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ಗೆ ಒಳಪಟ್ಟಿದ್ದು, ಕೆಎನ್‌ಸಿ ಅನುಮೋದನೆ ಪಡೆದಿದೆ. ಆದರೆ ಸ್ವಂತ ಕಟ್ಟಡವಿಲ್ಲದಿರುವುದು, ಉಪನ್ಯಾಸಕರ ಕೊರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ತರಗತಿಗಳು ತಾಲೂಕು ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ನಡೆಯುತ್ತಿವೆ. ಐಎನ್‌ಸಿ ಮಾನ್ಯತೆ ದೊರೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುವ ಆತಂಕ ಪೋಷಕರಲ್ಲಿ ಹೆಚ್ಚಾಗಿದೆ. ಅಲ್ಲದೆ, ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸುಮಾರು 100 ಕೋಟಿ ರು. ಅನುದಾನ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ.

9/11 ಸಮಸ್ಯೆ ಪರಿಹಾರ: ಪಂಚಾಯಿತಿ ವ್ಯವಸ್ಥೆಯ 9/11 (ಇ-ಸ್ವತ್ತು) ಸಂಬಂಧಿತ ಕಾರ್ಯಗಳಿಗಾಗಿ ಕಾರ್ಕಳ ತಾಲೂಕಿನ ಜನರು ಕಾಪು ತಾಲೂಕಿನ ಯೋಜನಾ ಪ್ರಾಧಿಕಾರ ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಹೆಬ್ರಿ ತಾಲೂಕಿನ ನಿವಾಸಿಗಳು ಉಡುಪಿ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸಬೇಕಾಗಿದೆ. ಇ-ಸ್ವತ್ತು ಆ್ಯಪ್ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ 9/11 ದಾಖಲೆಗಳಿಗೆ ಸಂಬಂಧಿಸಿದ ಸೇವೆಗಳು ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ವ್ಯತ್ಯಯಗೊಳ್ಳುತ್ತಿವೆ ಎಂಬ ದೂರಗಳು ಕೇಳಿಬರುತ್ತಿವೆ.

ಆನ್‌ಲೈನ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅರ್ಜಿದಾರರು ಪದೇಪದೇ ಕಚೇರಿಗಳಿಗೆ ತೆರಳಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಗೃಹನಿರ್ಮಾಣ ಮಾಡುವವರು 9/11 ದಾಖಲೆಗಾಗಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ದಾಖಲೆಗಳ ವಿಳಂಬದಿಂದ ಬ್ಯಾಂಕ್ ಸಾಲ, ಸರ್ಕಾರದ ಅನುದಾನ ಹಾಗೂ ಇತರೆ ಸೌಲಭ್ಯಗಳ ಪಡೆಯುವಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

*ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾರ್ಕಳದ ಸಮಗ್ರ ಅಭಿವೃದ್ದಿಗೆ ಅನುದಾನ ಒದಗಿಸುವಂತೆ ಸಹಕಾರಿ ಧುರೀಣ ಎಂ ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ‌ಮಾಡಲಾಗಿದೆ. ಅದಕ್ಕಾಗಿ ಸಿ ಎಂ ಸಿದ್ದರಾಮಯ್ಯ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ. -ಎಂ ವೀರಪ್ಪಮೊಯ್ಲಿ ಮಾಜಿ‌ಮುಖ್ಯಮಂತ್ರಿ.