ಭಾರತದಲ್ಲಿ ಉತ್ತಮ ಉದ್ದೇಶಕ್ಕಾಗಿ ದಾನ ನೀಡುವವರ ಸಂಖ್ಯೆ ಕಡಮೆಯಾಗಿಲ್ಲ. ಆದರೆ ಈ ರೀತಿ ನೀಡಿದ ದಾನ ಸೂಕ್ತವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವ ಕರ್ತವ್ಯ ದಾನ ಸ್ವೀಕರಿಸಿದವರ ಮೇಲಿದೆ ಎಂದು ಬೆಂಗಳೂರಿನ ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ಮಾಜಿ ಗವರ್ನರ್ ನಾಗೇಂದ್ರ ಪ್ರಸಾದ್ ಹೇಳಿದರು.

ಮಡಿಕೇರಿ: ಭಾರತದಲ್ಲಿ ಉತ್ತಮ ಉದ್ದೇಶಕ್ಕಾಗಿ ದಾನ ನೀಡುವವರ ಸಂಖ್ಯೆ ಕಡಮೆಯಾಗಿಲ್ಲ. ಆದರೆ ಈ ರೀತಿ ನೀಡಿದ ದಾನ ಸೂಕ್ತವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವ ಕರ್ತವ್ಯ ದಾನ ಸ್ವೀಕರಿಸಿದವರ ಮೇಲಿದೆ ಎಂದು ಬೆಂಗಳೂರಿನ ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ಮಾಜಿ ಗವರ್ನರ್ ನಾಗೇಂದ್ರ ಪ್ರಸಾದ್ ಹೇಳಿದರು.ನಗರದ ರೋಟರಿ ಸಭಾಂಗಣದಲ್ಲಿ ರೋಟರಿಯ 121ನೇ ದಿನಾಚರಣೆ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಆಶ್ರಯದಲ್ಲಿ 22 ಮಂದಿ ವಿಶೇಷ ಚೇತನರಿಗೆ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಉದ್ಘಾಟಿಸಿ ನಾಗೇಂದ್ರ ಪ್ರಸಾದ್ ಮಾತನಾಡಿದರು.

ಪೀಣ್ಯ ರೋಟರಿ ಸಂಸ್ಥೆ ಮೂಲಕ 22 ವರ್ಷಗಳಿಂದ ಕೃತಕ ಕಾಲು , ಕೈ ಜೋಡಣಾ ಶಿಬಿರ ಆಯೋಜಿಸಲ್ಪಡುತ್ತಿದ್ದು, ಪ್ರತಿ ವರ್ಷ 10 ದಿನ ಆಯೋಜಿತ ಶಿಬಿರದಲ್ಲಿ 1 ಕೋಟಿ ರು. ವೆಚ್ಚದಲ್ಲಿ 2,500 ಜನರಿಗೆ ಕೃತಕ ಕೈ, ಕಾಲು ಜೋಡಣೆ ಮಾಡಲಾಗುತ್ತಿದೆ ಎಂದೂ ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಅಪಘಾತದಲ್ಲಿ ಆಕಸ್ಮಿಕವಾಗಿ ಕೈ ಮತ್ತು ಕಾಲು ಕಳೆದುಕೊಂಡವರಿಗೆ ಕೃತಕ ರೀತಿಯಲ್ಲಿ ಕೈ ಕಾಲು ನೀಡುವಂಥ ಯೋಜನೆಗಳು ರೋಟರಿ ಸಂಸ್ಥೆಯಲ್ಲಿ ಪ್ರಮುಖವಾಗಿರಲಿ ಎಂದೂ ಅವರು ಕಿವಿಮಾತು ಹೇಳಿದರು.ರೋಟರಿ ಜಿಲ್ಲೆ 3181ರ ಚುನಾಯಿತ ಗವರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ರೋಟರಿಯ ಈ ವರ್ಷದ ಧ್ಯೇಯ ವಾಕ್ಯವಾದ ಒಳಿತಿಗಾಗಿ ಒಂದಾಗೋಣ ಎಂಬಂತೆ ರೋಟರಿ ಸದಸ್ಯರೆಲ್ಲರೂ ಸಮಾಜಕ್ಕೆ ಒಳಿತುಂಟುಮಾಡುವ ಉದ್ದೇಶದಿಂದ ಒಂದಾಗಿ ಸಾಮಾಜಿಕ ಸೇವಾ ಕಾರ್‍ಯಗಳಲ್ಲಿ ಸಕ್ರಿಯರಾಗಿದ್ದಾರೆ ಎಂದರು. ಕೊಡಗು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖಾಧಿಕಾರಿ ವಿಮಲ ಮಾತನಾಡಿ, ಸಮಾಜದ ಜನತೆ, ದುರ್ಬಲರು, ಅಸಹಾಯಕರನ್ನು ಗುರುತಿಸಿ ಅವರ ಸೇವೆಗೆ ಮುಂದಾಗುವ ರೋಟರಿಯಂಥ ಸೇವಾ ಸಂಸ್ಥೆಗಳ ಪಾತ್ರ ಶ್ಲಾಘನೀಯವಾಗಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಸ್ವಾಗತಿಸಿ, ಕಾರ್‍ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ, ವಲಯ ಸೇನಾನಿ ಕಾರ್ಯಪ್ಪ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು.

ಯೋಜನೆಯ ಸಂಚಾಲಕ ಡಾ. ಚೆರಿಯಮನೆ ಪ್ರಶಾಂತ್ ಕಾರ್‍ಯಕ್ರಮ ನಿರೂಪಿಸಿದರು. ಕೃತಕ ಕೈ, ಕಾಲ ಉತ್ಪಾದನೆಯ ಮೈಸೂರಿನ ಪುನಶ್ಚೇತನ ಸಂಸ್ಥೆಯ ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಶ್ರೀಹರಿ, ಅಂಬೆಕಲ್ ವಿನೋದ್, ಪ್ರಮೋದ್ ಕುಮಾರ್ ರೈ, ಪ್ರಸಾದ್ ಗೌಡ, ರತ್ನಾಕರ್ ರೈ, ಬಿ.ಕೆ. ಕಾರ್ಯಪ್ಪ, ಜಿ.ಆರ್. ರವಿಶಂಕರ್, ಅಶೋಕ್ ಪಿ.ವಿ. ಹಾಜರಿದ್ದರು.