ಸಂಘರ್ಷದ ಹಾದಿಯಲ್ಲಿರುವ ಇಂದಿನ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ ನೆಲೆಸಬೇಕೆಂದರೆ ಶಾಂತಿ ಸೌಹಾರ್ದತೆಗೆ ಹೆಚ್ಚಿನ ಮಹತ್ವ ನೀಡುವ (ವಸುದೈವ ಕುಟುಂಬಕಂ) ತತ್ವವನ್ನು ಸಾರುವ ಸನಾತನ ಧರ್ಮ (ಹಿಂದೂ ಧರ್ಮದ) ತತ್ವ ಸಿದ್ಧಾಂತಗಳ ಅಗತ್ಯತೆ ಇಡಿ ವಿಶ್ವಕ್ಕೆಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಮಹೇಶ್ ಕಡಗದಾಳು ಹೇಳಿದ್ದಾರೆ.
ಮಡಿಕೇರಿ: ಸಂಘರ್ಷದ ಹಾದಿಯಲ್ಲಿರುವ ಇಂದಿನ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ ನೆಲೆಸಬೇಕೆಂದರೆ ಶಾಂತಿ ಸೌಹಾರ್ದತೆಗೆ ಹೆಚ್ಚಿನ ಮಹತ್ವ ನೀಡುವ (ವಸುದೈವ ಕುಟುಂಬಕಂ) ತತ್ವವನ್ನು ಸಾರುವ ಸನಾತನ ಧರ್ಮ (ಹಿಂದೂ ಧರ್ಮದ) ತತ್ವ ಸಿದ್ಧಾಂತಗಳ ಅಗತ್ಯತೆ ಇಡಿ ವಿಶ್ವಕ್ಕೆಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಮಹೇಶ್ ಕಡಗದಾಳು ಹೇಳಿದ್ದಾರೆ.
ಹಿಂದೂ ಸಂಗಮ ಯೋಜನಾ ಸಮಿತಿ ವಿರಾಜಪೇಟೆ ತಾಲೂಕು ಸಿದ್ದಾಪುರ ಮಂಡಲ ವತಿಯಿಂದ ಸಿದ್ದಾಪುರದ ಸ್ವರ್ಣ ಮಾಲಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕರ್ಮ ಉದ್ಘಾಟಿಸಿ ಅವರು ಮಾತನಾಡಿದರು.ಈವರೆಗೂ ಹಿಂದೂ ಸಂಗಮ ಕಾರ್ಯಕ್ರಮಗಳಿಂದ ಯಾವುದೇ ಅಹಿತಕ ಘಟನೆ ನಡೆಯದಿದ್ದರೂ, ಯಾರನ್ನೋ ಓಲೈಕೆ ಮಾಡುವ ಸಲುವಾಗಿ ಹಿಂದೂ ಸಂಗಮ ಯಾತ್ರೆ ತಡೆಯುವ ಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬ್ಧಿ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹಿಂದೂ ಸಂಗಮ ನಡೆಯುತ್ತಿದೆ. ಆದರೆ ಹಿಂದೂ ಸಂಗಮವನ್ನು ತಡೆಯುವ ಯತ್ನ ನಡೆಯುತ್ತಿದೆ ಎಂದರು.
ಸೇವಾ ಭಾರತೀಯ ಜಿಲ್ಲಾ ಸಂಚಾಲಕ ಟಿ.ಸಿ ಚಂದ್ರನ್ ಮಾತನಾಡಿ, ಹಿಂದೂಗಳಲ್ಲಿ ಹಿಂದುತ್ವ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮಂಡಲಗಳಲ್ಲಿ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ. ಹಿಂದೂಗಳು ಒಗ್ಗಟ್ಟಾಗಿ ಸದೃಢ ಭಾರತವನ್ನು ಕಟ್ಟಬೇಕು ಎಂದರು.ಪೊನ್ನಂಪೇಟೆ ಶಾರದಾಶ್ರಮದ ಭೂನಾಥ ನಂದ ಸ್ವಾಮೀಜಿ ತಾಯಿ ಭಾರತಾಂಬೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಹಾಗೂ ಹಿಂದೂ ಸಂಗಮ ಯೋಜನಾ ಸಮಿತಿ ಸಂಚಾಲಕ ರೂಪೇಶ್ ಸಹ ಸಂಚಾಲಕ ಡಿಜಿತ್, ಪ್ರಮುಖರಾದ ಸುರೇಶ್ ನೆಲ್ಲಿಕಲ್, ಅನಿಲ್, ಸುಬ್ರಮಣಿ, ಗುರುದರ್ಶನ್ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳ ಪ್ರತಿನಿಧಿಗಳು ಭಾಗವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಕೇಸರಿ ಶಲ್ಯ, ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಕಳಶ ಹಿಡಿದು ಸಾಗಿದರೆ, ವಿರಾಜಪೇಟೆ ನಾಟ್ಯಾಂಜಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಣೀಯ ಭಜನೆಕುಣಿತ ಹಾಗೂ ಮಾಲ್ದಾರೆ ಚಂಡೆ ಮೇಳಗಳೊಂದಿಗೆ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣ ತಲುಪಿ ಅಲ್ಲಿಂದ ಸ್ವರ್ಣಮಾಲ ಮಂಟಪದ ವರೆಗೆ ಮೆರವಣಿಗೆ ನಡೆಸಲಾಯಿತು. ಸಿದ್ದಾಪುರ ಸುತ್ತಮುತ್ತಲ ಭಾಗದ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶಾಲಾಕ್ಷಿ ನಿರೂಪಿಸಿದರು. ಸುರೇಶ್ ಸ್ವಾಗತಿಸಿದರು. ಡಿಜಿತ್ ವಂದಿಸಿದರು.